ಬೆಂಗಳೂರು,ಜೂ.22-ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ನಂಬಿ ಜೈಲು ಸೇರಿದವರ ಕುಟುಂಬಕ್ಕೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ.
ಇತ್ತೀಚೆಗಷ್ಟೆ ಆರೋಪಿ ಅನುಕುಮಾರ್ ತಂದೆ ನಿಧನ ಹೊಂದಿ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದ ಬೆನ್ನಲ್ಲೇ ಐದನೇ ಆರೋಪಿ ನಂದೀಶ್ ಕಣ್ಣೀರಿನ ಕಥೆ ಹೊರಬಿದ್ದಿದೆ.
ನಂದೀಶ್ ಮಂಡ್ಯ ತಾಲೂಕಿನ ಚಾಮಲಪುರ ಗ್ರಾಮದವರಾಗಿದ್ದಾರೆ, ಜೈಲಲ್ಲಿರುವ ಮಗನ ನೋಡಲು ಬೆಂಗಳೂರಿಗೆ ಬರಲಾಗದೆ ನಂದೀಶ್ ಹೆತ್ತವರು ಒದ್ದಾಡುತ್ತಿದ್ದಾರೆ. ಸ್ನೇಹಿತರೊಬ್ಬರು ವಾಹನ ವ್ಯವಸ್ಥೆ ಮಾಡಿ ಕೊಟ್ಟರು. ಆದರೆ, ಡಿಸೇಲ್ಗೆ ಹಣ ಹೊಂದಿಸಲಾಗಿಲ್ಲ. ನಂದೀಶ್ ತಾಯಿ ಭಾಗ್ಯಮ್ಮ ಅಸ್ತಮ ಸಮಸ್ಯೆಯಿಂದ ತೀವ್ರ ಬಳಲುತ್ತಿದ್ದಾರೆ. ಮಾಧ್ಯಮದವರನ್ನ ಹೊರತುಪಡಿಸಿ ಮನೆ ಬಳಿಗೆ ಸೌಜನ್ಯಕ್ಕೂ ದರ್ಶನ್ ಅಭಿಮಾನಿಗಳು, ಆಪ್ತರು ಭೇಟಿ ನೀಡಿಲ್ಲ.
ನಂದೀಶ್ ಬಿಡುಗಡೆಗೆ ಪ್ರಯತ್ನಿಸುವುದು ಕಷ್ಟದ ಮಾತಾಗಿದೆ. ಬೆಂಗಳೂರಿಗೆ ಬರಲು ಹಣವಿಲ್ಲ. ಹೀಗಿರುವಾಗ ವಕೀಲರನ್ನು ನೇಮಿಸಿಕೊಳ್ಳೋದು ಹೇಗೆ? ಅವರಿಗೆ ಹಣ ನೀಡುವುದು ಹೇಗೆ? ‘ದರ್ಶನ್ ಅಭಿಮಾನಿ ಎನಿಸಿಕೊಂಡ ಯಾರೊಬ್ಬರು ನಮ್ಮ ಕಷ್ಟ ಕೇಳಲಿಲ್ಲ’ ಎಂದು ಮಾಧ್ಯಮಗಳ ಮುಂದೆ ನಂದೀಶ್ ಅಕ್ಕ ನಂದಿನಿ ಕಣ್ಣೀರು ಹಾಕಿದ್ದಾರೆ.
ದರ್ಶನ್ ಜೊತೆ ಬಂಧನಕ್ಕೆ ಒಳಗಾದ ಎಲ್ಲಾ ಅಭಿಮಾನಿಗಳದ್ದು ಒಂದೊಂದು ರೀತಿಯ ಕಥೆ ಇದೆ. ಬಹುತೇಕರ ಕುಟುಂಬ ಕಷ್ಟದಲ್ಲಿಯೇ ಇದೆ. ದರ್ಶನ್ ಸೇರಿ ಕೆಲವೇ ಕೆಲವು ಮಂದಿ ವಕೀಲರ ನೇಮಿಸಿಕೊಂಡಿದ್ದಾರೆ.
Previous Articleಮೋಹಕ ತಾರೆ ರಮ್ಯಾಗೆ ಬೇಸರವಂತೆ.
Next Article ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ.