ಬೆಂಗಳೂರು,ಸೆ.13-
ಅಸಲಿ ಜಿಎಸ್ಟಿ ಅಧಿಕಾರಿಗಳು ನಕಲಿ ಶೋಧ ನಡೆಸಿ ವಂಚನೆ ನಡೆಸಿದ ಪ್ರಕರಣದಲ್ಲಿ
ಬಂಧಿತ ನಾಲ್ವರು ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಬೆಳಕಿಗೆ ಬಂದಿದೆ.
ಬಂಧಿತರನ್ನು ತೀವ್ರ ವಿಚಾರಣೆ ನಡೆಸಿರುವ ಸಿಸಿಬಿ ಅಧಿಕಾರಿಗಳು ಮಹಿಳಾ ಅಧಿಕಾರಿಯ ಮನೆಯಲ್ಲಿ 32 ಮೊಬೈಲ್ ಗಳು,50 ಚೆಕ್ ಬುಕ್ ಗಳನ್ನು ಪತ್ತೆಹಚ್ಚಿದ್ದಾರೆ.
ನಕಲಿ ಶೋಧ ನಡೆಸಿ ವಂಚನೆ ನಡೆಸಿದ ಬಂಧಿತ ನಾಲ್ವರು ಅಧಿಕಾರಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನಗಳ ಕಾಲ ಕಸ್ಟಡಿಗೆ ಪಡೆದಿರುವ ಸಿಸಿಬಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಕಳೆದ ಆಗಸ್ಟ್ 30 ರಂದು ಆರೋಪಿಗಳು ಉದ್ಯಮಿ ಕೇಶವ್ ಅವರ ಮನೆ ಶೋರೂಂ, ಮನೆ ಸೇರಿದಂತೆ ಹಲವು ಕಡೆಗಳಲ್ಲಿ ಪರಿಶೀಲನೆ ನಡೆಸಿದ್ದರು.
ಪರಿಶೀಲನೆ ನಡೆಸಿದ ಅಧಿಕಾರಿಗಳು, ಕೇಶವ್ ಸೇರಿದಂತೆ ಅವರ ಮನೆಯಲ್ಲಿದ್ದ ನಾಲ್ವರನ್ನು ಬಲವಂತವಾಗಿ ವಶಕ್ಕೆ ಪಡೆದು ಜೀವನ್ ಭೀಮಾನಗರ, ಇಂದಿರಾನಗರದ ವಿವಿಧ ಕಡೆಗಳಲ್ಲಿ ಸುತ್ತಾಡಿಸಿದ್ದರು. ರಾತ್ರಿ ಪೂರ್ತಿ ಕೂಡಿ ಹಾಕಿ ಮೂರು ಕೋಟಿ ಹಣ ನೀಡುವಂತೆ ಉದ್ಯಮಿ ಕೇಶವ್ ಅವರ ಮೇಲೆ ಹಲ್ಲೆ ಮಾಡಿದ್ದರು.
ಈ ವೇಳೆ ಭಯಗೊಂಡ ಉದ್ಯಮಿ ಕೇಶವ್, ರೋಷನ್ ಜೈನ್ ಎಂಬುವರಿಗೆ ವಾಟ್ಸಪ್ ಕಾಲ್ ಮಾಡಿ ಮೂರು ಕೋಟಿ ಹಣ ತರುವಂತೆ ಹೇಳಿದ್ದರು. ಮರುದಿನ ರೋಷನ್ ಜೈನ್ ಅವರು ಮೂರು ಕೋಟಿ ಬದಲಿಗೆ ಒಂದುವರೆ ಕೋಟಿ ಹಣ ತಂದುಕೊಟ್ಟಿದ್ದರು. ಬಳಿಕ ಜಿಎಸ್ಟಿ ಅಧಿಕಾರಿಗಳು ಉದ್ಯಮಿ ಕೇಶವ್ ಮತ್ತು ಅವರ ಕಡೆಯವರನ್ನು ಬಿಟ್ಟು ಕಳುಹಿಸಿದ್ದರು.
ಈ ವಿಚಾರ ತಿಳಿದ ಸಿಸಿಬಿ ಅಧಿಕಾರಿಗಳು ತನಿಖೆಗೆ ಇಳಿದ್ದಿದ್ದರು. ತನಿಖೆ ವೇಳೆ, ಈ ನಾಲ್ವರು ಜಿಎಸ್ಟಿ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ ಅಕ್ರಮವಾಗಿ ದಾಳಿ ನಡೆಸಿ ಒಂದುವರೇ ಕೋಟಿ ಹಣ ಪಡೆದಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಇಂಟಲಿಜೆನ್ಸ್ ಆಫೀಸರ್ ಸೊನಾಲಿ ಸಹಾಯಿ, ಸೀನಿಯರ್ ಇಂಟಲಿಜೆನ್ಸ್ ಆಫೀಸರ್ ಮೋನೊಜ್ ಸೈನಿ, ಎಸ್ಪಿ (ಸೂಪರಿಂಡೆಂಟ್) ಅಭಿಷೇಕ್, ಸೀನಿಯರ್ ಇಂಟಲಿಜೆನ್ಸ್ ನಾಗೇಶ್ ಬಾಬು ಎಂಬ ನಾಲ್ವರು ಅಧಿಕಾರಿಗಳನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದರು.
ಬಳಿಕ ಸಿಸಿಬಿ ಅಧಿಕಾರಿಗಳು ನ್ಯಾಯಾಲಯದ ಅನುಮತಿ ಪಡೆದು ಬಂಧಿತ ಅಧಿಕಾರಿಗಳ ನಿವಾಸದಲ್ಲಿ ತಪಾಸಣೆ ನಡೆಸಿದರು. ಮಹಿಳಾ ಅಧಿಕಾರಿ ಸೋನಾಲಿ ಅವರ ನಿವಾಸದಲ್ಲಿ 32 ಮೊಬೈಲ್, 50 ಚೆಕ್ ಬುಕ್ ಮತ್ತು ಎರಡು ಲ್ಯಾಪ್ ಟಾಪ್ಗಳನ್ನು ಸಿಸಿಬಿ ವಶಕ್ಕೆ ಪಡೆದಿದೆ. ಸಿಸಿಬಿ ಅಧಿಕಾರಿಗಳು ಆರೋಪಿಗಳನ್ನು 13 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು, ವಿಚಾರಣೆ ನಡೆಸಿದ್ದಾರೆ.
Previous Articleಸೆಡ್ಡು ಹೊಡೆದ ಈಶ್ವರಪ್ಪ.
Next Article ಮಾಜಿ ಸಚಿವ ಮುನಿರತ್ನ ವಿರುದ್ಧ ಎಫ್ಐಆರ್.