ಬೆಂಗಳೂರು,ಮೇ.14-
ಮಹಿಳೆಯೊಬ್ಬರ ಬಣ್ಣದ ಮಾತು ಕೇಳಿ ಇಂಗು ತಿಂದ ಮಂಗನಂತಾದ ಕಥೆ ಇದು. ಬೆಂಗಳೂರು ನಗರ ಹಾಗೂ ಮೈಸೂರಿನಲ್ಲಿ ಸುತ್ತಾಡಲು ಕಾರು ಬೇಕಿದೆ ಎಂದು ಹೇಳಿ ಬಾಡಿಗೆಗಾಗಿ ಬುಕ್ ಮಾಡಿದ್ದ ಕಾರು ಸಮೇತ ಮಹಿಳೆಯೊಬ್ಬರು ಪರಾರಿಯಾಗಿದ್ದಾಳೆ
ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಎಚ್ಎಂಟಿ ಲೇಔಟ್ ನಿವಾಸಿ ಅನಂತಕುಮಾರ್ ವೃತ್ತಿಯಲ್ಲಿ ಕಾಲು ಚಾಲಕರಾಗಿದ್ದಾರೆ.ಈತನ ಭಾವ ಶಂಕರ್ ನಾಯಕ್ ಹೆಸರಿನಲ್ಲಿದ್ದ ಹುಂಡೈ ಎಕ್ಸೆಂಟ್ ಕಾರನ್ನು 8 ವರ್ಷಗಳಿಂದ ಓಡಿಸುತ್ತಿದ್ದಾರೆ.
ಇವರು ಕಳೆದ 15 ದಿನಗಳ ಹಿಂದೆ ಬಾಡಿಗೆ ನಿಮಿತ್ತ ಕಾರವಾರಕ್ಕೆ ಹೋಗಿದ್ದರು. ಅಲ್ಲಿ ಇವರಿಗೆ ಮಹಿಳೆಯೊಬ್ಬರ ಪರಿಚಯವಾಗಿದೆ. ಆಕೆ ತಾನು ಆಗಿಂದಾಗ್ಗೆ ಬೆಂಗಳೂರು ಹಾಗೂ ಮೈಸೂರಿಗೆ ಬರುತ್ತೇನೆ ಈ ಬಾರಿ ಬಂದಾಗ ನಿಮ್ಮ ಕಾರನ್ನು ಬಾಡಿಗೆಗೆ ಪಡೆದುಕೊಳ್ಳುತ್ತೇನೆ ಎಂದು ಹೇಳಿ ನಂಬಿಸಿದ್ದಾರೆ.
ಇದಾದ ನಂತರ ಆ ಮಹಿಳೆ ಕಾರಿನ ಚಾಲಕ ಅನಂತ ಜೊತೆ ಹಲವು ಬಾರಿ ವಾಟ್ಸಾಪ್ ನಲ್ಲಿ ಚಾಟ್ ಮಾಡಿದ್ದಾರೆ. ಹೀಗಾಗಿ ಇಬ್ಬರ ನಡುವೆ ಒಂದು ರೀತಿ ಆತ್ಮೀಯತೆ ಏರ್ಪಟ್ಟಿದೆ. ಈ ಮಹಿಳೆ ಮೇ 6ರ ರಾತ್ರಿ ವಾಟ್ಸ್ಆ್ಯಪ್ ಕರೆ ಮಾಡಿ ತಾನು ಬೆಂಗಳೂರಿಗೆ ಬಂದಿರುವುದಾಗಿ ಹೇಳಿದ್ದಾಳೆ. ಆಗ ಅನಂತ್ ತಾನು ಕೆಲಸದ ನಿಮಿತ್ತ ಹುಬ್ಬಳ್ಳಿ ಗೆ ಬಂದಿದ್ದೇನೆ ನಾಳೆ, ಮೇ 7ರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿಗೆ ಬರುವುದಾಗಿ ಹೇಳಿದ್ದರು.
ಇದಾದ ನಂತರ ನಿಗದಿತ ಸಮಯಕ್ಕೆ ಮಾರನೇ ದಿನ ಬಂದು ತಾನು ಪೀಣ್ಯ 8ನೇ ಮೈಲಿ ಸಿಗ್ನಲ್ ಬಳಿ ಬಂದಿರುವುದಾಗಿ ಮಹಿಳೆಗೆ ಚಾಲಕ ವಿಷಯ ಮುಟ್ಟಿಸಿದ್ದ. ನಗರಕ್ಕೆ ಬಂದಿರುವುದಾಗಿ ಅರಿತ ಅಪರಿಚಿತ ಮಹಿಳೆ, ತಾನು ರೆಡಿಯಾಗಬೇಕು. ಹೀಗಾಗಿ ಲಾಡ್ಜ್ ವೊಂದರಲ್ಲಿ ರೂಮ್ ಬುಕ್ ಮಾಡುವಂತೆ ತಿಳಿಸಿ ದಾಖಲಾತಿಗಳನ್ನು ನನ್ನ ವಾಟ್ಸ್ಆ್ಯಪ್ ನಂಬರ್ ಗೆ ಕಳುಹಿಸಿದ್ದಳು.ಅದರಂತೆ ಸಿಡೇದಹಳ್ಳಿ ಬಳಿಯ ಪಿ.ವಿ. ರೆಸಿಡೆನ್ಸಿಯಲ್ಲಿ ರೂಮ್ ಬುಕ್ ಮಾಡಿದ್ದೆ ಎಂದು ಚಾಲಕ ದೂರಿನಲ್ಲಿ ತಿಳಿಸಿದ್ದಾನೆ.
ಬುಕ್ ಮಾಡಿದ್ದ ರೂಮಿಗೆ ಬಂದ ಮಹಿಳೆಯು ರೆಡಿಯಾಗುವಾಗ ಸ್ಥಳಕ್ಕೆ ಬಂದ ಚಾಲಕನಿಗೆ ತಾನು ಬ್ಯೂಟಿಪಾರ್ಲರ್ ಗೆ ಹೋಗಬೇಕಿದೆ. ಹೀಗಾಗಿ ನೀವೂ ರೆಡಿಯಾಗುವಂತೆ ಸೂಚಿಸಿದ್ದಳು. ಇದನ್ನು ನಂಬಿದ ಚಾಲಕ ತನ್ನ ಬಳಿಯಿದ್ದ ಮೊಬೈಲ್ ಗೆ ಚಾರ್ಜ್ ಹಾಕಿ ಕಾರಿನ ಕೀಯನ್ನು ಟೇಬಲ್ ಮೇಲಿಟ್ಟು ಶೌಚಗೃಹಕ್ಕೆ ಹೋಗಿದ್ದರು. ಈ ವೇಳೆ ಮಹಿಳೆಯು ಹೊರಗಿನಿಂದ ಶೌಚಗೃಹದ ಬಾಗಿಲಿನ ಚಿಲಕ ಹಾಕಿ ಮೊಬೈಲ್ ಹಾಗೂ ಕಾರಿನ ಕೀ ಸಮೇತ ಪರಾರಿಯಾಗಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹೊರಗೆ ಚಿಲಕ ಹಾಕಿರುವುದನ್ನು ಅರಿತು ಕಿಟಕಿ ಮೂಲಕ ಹೊರಗಿದ್ದವರನ್ನ ಕರೆಯಿಸಿಕೊಂಡು ಬಾಗಿಲಿನ ಚಿಲಕ ತೆಗೆಸಿಕೊಂಡ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ಧಾರೆ
Previous Articleವಿದ್ಯುತ್ ಸಂಬಂಧ ದೂರು ಸಲ್ಲಿಸಲು ಡಿಜಿಟಲ್ ಪೋರ್ಟಲ್
Next Article ಮಂತ್ರಿಗಳು ರಾಜಿನಾಮೆ ಕೊಡಬೇಕಂತೆ.
