ವಿಜಯಪುರ:
ರೈತರು, ಸಂಘ-ಸಂಸ್ಥೆಗಳ, ಮಠಗಳ ಮತ್ತು ಸರ್ಕಾರಿ ಜಮೀನುಗಳ ಪಹಣಿಯಲ್ಲಿ ವಕ್ಪ್ ಆಸ್ತಿ ಎಂದು ನಮೂದು ಮಾಡಿರುವುದನ್ನು ತೆಗೆಯುವಂತೆ ಒತ್ತಾಯಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಇಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಜಿಲ್ಲಾಧಿಕಾರಿ ಕಚೇರಿ ಹೊರ ಭಾಗದಲ್ಲಿ ಸಮಾವೇಶಗೊಂಡು ಆಹೋರಾತ್ರಿ ಧರಣಿ ಆರಂಭಿಸಿದರು.
ಈ ವೇಳೆ ಮಾತನಾಡಿದ ಅವರು ಜಮೀನಿನ
ಪಹಣಿಯ ಯಾವುದೇ ಕಾಲಂ ದಲ್ಲಿಯೂ ವಕ್ಫ್ ಆಸ್ತಿ ಎಂದು ಇರಬಾರದು. ಪಹಣಿಯಲ್ಲಿ ರೈತರ ಹೆಸರು ಮಾತ್ರ ಇರಬೇಕು. ರೈತರ ಆಸ್ತಿಗಳಿಗೆ ಸಂಬಂಧಿಸಿದ ತಕರಾರು ಸಾಮಾನ್ಯ ಕೋರ್ಟ್ ಗಳಲ್ಲೇ ಇತ್ಯರ್ಥ ಆಗಬೇಕು. ವಕ್ಫ್ ನ್ಯಾಯಾಲಯಕ್ಕೆ ಅವಕಾಶ ಕಲ್ಪಿಸಬಾರದು. ವಕ್ಫ್ ಅದಾಲತ್ ಮಾಡುವುದರಿಂದ ಸರ್ಕಾರಿ ನ್ಯಾಯಾಲಯಕ್ಕೆ ಮಹತ್ವ ಕಡಿಮೆ ಆಗಲಿದೆ. ಎಲ್ಲಿಯೂ ವಕ್ಫ್ ಅದಾಲತ್ ನಡೆಸಬಾರದು ಎಂದು ಆಗ್ರಹಿಸಿದರು
ಈಗಾಗಲೇ ವಕ್ಫ್ ಆಸ್ತಿ ಅಂತ ನಮೂದು ಆಗಿದ್ದನ್ನು ತೆಗೆದು ಹಾಕಬೇಕು. ಮುಂದಿನ ದಿನಗಳಲ್ಲಿ ನೋಟಿಸ್ ನೀಡದಂತೆ ಜಿಲ್ಲಾಧಿಕಾರಿ ಲಿಖಿತವಾಗಿ ಆದೇಶ ಹೊರಡಿಸಬೇಕು. ವಕ್ಫ್ ಕಾಯ್ದೆಯನ್ನು ರದ್ದುಪಡಿಸಬೇಕು. ಇಡೀ ದೇಶದ ಎಲ್ಲ ರಾಜ್ಯಗಳಲ್ಲಿಯ ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಬೇಕು ವಕ್ಪ್ ಆಸ್ತಿ ದೇಶದ ಆಸ್ತಿಯೆಂದು ಸರ್ಕಾರದ ಸುಪರ್ದಿಗೆ ಪಡೆಯಬೇಕು. 1974 ರ ಮತ್ತು ತದ ನಂತರದ ವಕ್ಫ್ ಗೆಜೆಟ್ ನೋಟಿಫಿಕೇಶನ್ಗಳನ್ನು ಹಿಂಪಡೆಯಬೇಕು. ಇಲ್ಲಿಯವರೆಗಿನ ವಕ್ಫ್ ಬೋರ್ಡ್ ಗಳಿಸಿದ ಆದಾಯವನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಈ ಎಲ್ಲ ಬೇಡಿಕೆ ಈಡೇರುವವರೆಗು ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.
ಯತ್ನಾಳ್ ಧರಣಿಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.