ಮಡಿಕೇರಿ:
ಸೌತ್ ಇಂಡಿಯನ್ ಸೆನ್ಸೇಷನ್ ಕೊಡಗಿನ ಬೆಡಗಿ
ರಶ್ಮಿಕಾ ಮಂದಣ್ಣ ಅವರ ತಂಟೆಗೆ ಬಂದರೆ ಅವರು ಶಾಸಕರೇ ಆಗಲಿ ಯಾರೇ ಆಗಿದ್ದರೂ ಸುಮ್ಮನಿರುವುದಿಲ್ಲ… ಇಂತಹ ಎಚ್ಚರಿಕೆ ನೀಡಿರುವುದು ಬೇರೆ ಯಾರೂ ಅಲ್ಲ ಕೊಡವ ನ್ಯಾಷನಲ್ ಕೌನ್ಸಿಲ್.
ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭದಲ್ಲಿ ಸಿನಿಮಾ ನಟರು ಪಾಲ್ಗೊಳ್ಳುವ ಕುರಿತಂತೆ ವಿವಾದ ಉಂಟಾಗಿದೆ. ಇದರ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಅವರು ಚಲನಚಿತ್ರೋತ್ಸವದಲ್ಲಿ ಭಾಗಿಯಾಗದಿರುವ ಬಗ್ಗೆ ಮಂಡ್ಯ ಶಾಸಕ ರವಿಕುಮಾರ್ ಗಣಿಗ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದರು.
ಇದಕ್ಕೆ ಉತ್ತರ ನೀಡಿರುವ ಕೊಡಗು ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ
ಕಾವೇರಿ ನದಿಯನ್ನೇ ಬಹುವಾಗಿ ನೆಚ್ಚಿಕೊಂಡಿರುವ ಮಂಡ್ಯದ ಜನತೆಯನ್ನು ಪ್ರತಿನಿಧಿಸುವ ಶಾಸಕರು ಕಾವೇರಿ ಮಾತೆಯ ಪ್ರೀತಿಯ ಪುತ್ರಿ ಹಾಗೂ ಈ ಭಾಗದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರನ್ನು ಅಗೌರವದಿಂದ ಕಂಡಿರುವುದು ನಿಜಕ್ಕೂ ಕಂಡ ನೀಯ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವುದಾಗಿ ಮತ್ತು ಜನರನ್ನು ರಕ್ಷಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿರುವ ಶಾಸಕರ ಅರ್ಥಹೀನ ಟೀಕಾ ಪ್ರಹಾರದ ಕಾರ್ಯವೈಖರಿ ಎಂದು ಖಂಡಿಸಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಜನಪ್ರಿಯತೆ ಹಾಗೂ ಕಲಾಪ್ರತಿಭೆಯನ್ನು ಅರಿಯದವರು ವಿನಾಕಾರಣ ಟೀಕೆ ಮಾಡುವ ಮೂಲಕ ಮಾನಸಿಕ ಕಿರುಕುಳ ನೀಡಿರುವುದು ಘೋರ ಸ್ವರೂಪ ಮತ್ತು ಬೆದರಿಕೆಗೆ ಸಮವಾಗಿದೆ ಎಂದು ಅವರು ಆರೋಪಿಸಿದ್ದಾರೆ.
‘ರಶ್ಮಿಕಾ ಮಂದಣ್ಣ ಅವರು ಭಾರತೀಯ ಚಲನಚಿತ್ರ ರಂಗಕ್ಕೆ ದೊರೆತ ಅಪೂರ್ವ ಕೊಡುಗೆ ಹಾಗೂ ಶ್ರೇಷ್ಠ ನಟಿ. ಅವರ ಸ್ವಂತ ನಿರ್ಧಾರದ ಆಯ್ಕೆಗಳ ಸ್ವಾತಂತ್ರ್ಯದ ಹಕ್ಕನ್ನು ನಾವು ಗೌರವಿಸಬೇಕು. ಯಾರದ್ದೋ ಸೂಚನೆಯಂತೆ ಅಥವಾ ನಿರೀಕ್ಷೆಯಂತೆ ನಡೆದುಕೊಳ್ಳಬೇಕೆಂದು ಒತ್ತಾಯಿಸಬಾರದು. ಒಂದು ವೇಳೆ ಹೀಗೆ ಮಾಡಿದರೆ ಕೊಡವ ಫೋಬಿಯಾವನ್ನು ಪ್ರತಿಬಿಂಬಿಸುತ್ತದೆ, ಅಲ್ಲದೆ ಕೇವಲ ರಶ್ಮಿಕಾ ಅವರ ಸಮುದಾಯದ ಕಾರಣದಿಂದಾಗಿ ಗುರಿಪಡಿಸುತ್ತಿದ್ದಾರೆ ಎನ್ನುವ ಅರ್ಥ ಬರುತ್ತದೆ ಎಂದು ಟೀಕಿಸಿದ್ದಾರೆ.
ಆದಿಮ ಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ಸೇರಿದ ರಶ್ಮಿಕಾ ಮಂದಣ್ಣ ಅವರು ತಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆ ಅನಾವರಣದ ಮೂಲಕ ಭಾರತೀಯ ಚಲನಚಿತ್ರೋದ್ಯಮದಲ್ಲಿ ಅಪಾರ ಯಶಸ್ಸನ್ನು ಸಾಧಿಸಿದ್ದಾರೆ.ಆದರೆ ಅವರ ಬಗ್ಗೆ ಮನಬಂದಂತೆ ಮಾತನಾಡುತ್ತಿರುವುದು ವಿಪರ್ಯಾಸ. ಎಂದು ಹೇಳಿದ್ದಾರೆ.