ಬೆಂಗಳೂರು,ಮೇ.1-
ರಾಜ್ಯದ ಹಣಕಾಸು ಪರಿಸ್ಥಿತಿ ಅಯೋಮಯವಾಗಿದೆ ಖಜಾನೆ ಸಂಪೂರ್ಣ ಖಾಲಿಯಾಗಿದ್ದು, ಹಾಲು ಉತ್ಪಾದಕರಿಗೆ ನೀಡಬೇಕಾದ ಸಹಾಯಧನದ ಮೊತ್ತ 700 ಕೋಟಿ ರೂಪಾಯಿ ದಾಟಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ಆಪಾದಿಸಿದೆ.
ಬರಗಾಲದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರೈತರು ಇದೀಗ ಹಾಲಿನ ಸಹಾಯಧನದ ಬಾಕಿ ದೊರಕದೆ ಮತ್ತಷ್ಟು ಐರಾಣರಾಗಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಕಾಲ ಹರಣ ಮಾಡದೆ ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ
ಕಳೆದ ಎಂಟು ತಿಂಗಳಿಂದ ರೈತರಿಗೆ ಸರ್ಕಾರ ಹಾಲಿನ ಪ್ರೋತ್ಸಾಹಧನ ನೀಡಿಲ್ಲ. ಖಜಾನೆ ಖಾಲಿಯಾಗಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಹೇಳಿದರು.
ಹಣಕಾಸು ಇಲಾಖೆ ಉಸ್ತುವಾರಿ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರಿಗೆ ತೆರಿಗೆ ಹಾಕಿ ಅವರಿಂದ ವಸೂಲಿ ಮಾಡಿ ನಂತರ ಮಹಿಳೆಯರಿಗೆ ಹಣ ನೀಡುತ್ತೇವೆ ಎಂದು ನಾಟಕವಾಡಿದ್ದಾರೆ.
ಖಜಾನೆ ಖಾಲಿ ಮಾಡಿಕೊಂಡ ಬಳಿಕ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಕಳೆದ 50 ವರ್ಷದಲ್ಲಿ ಕಾಂಗ್ರೆಸ್ ಸರ್ಕಾರದಿಂದ ರಾಜ್ಯಕ್ಕೆ ಎಷ್ಟು ಹಣ ಬಂದಿದೆ ಎಂದು ತಿಳಿಸುವಂತೆ ಆಗ್ರಹಿಸಿದರು.
ಸಿದ್ದರಾಮಯ್ಯ ಕೇವಲ ಗ್ಯಾರಂಟಿ ಬಗ್ಗೆ ಮಾತನಾಡುತ್ತಿದ್ದಾರೆ. ಇವರಿಗೆ ನೈತಿಕತೆ ಇದ್ದರೆ ಹಿಂದಿನ ಯುಪಿಎ ಸರ್ಕಾರ ಏನು ಮಾಡಿದೆ ಎಂದು ಜಾಹೀರಾತು ನೀಡಬೇಕಿತ್ತು. ಇದೇ ಕಾಂಗ್ರೆಸ್ ದೇಶಕ್ಕೆ ಚೊಂಬು ನೀಡಿತ್ತು. ನಂತರ ಬಂದ ಪ್ರಧಾನಿ ನರೇಂದ್ರ ಮೋದಿ ಶೌಚಾಲಯಗಳನ್ನು ಕಟ್ಟಿಸಿ ಚೊಂಬು ಬಳಸದಂತೆ ಮಾಡಿದರು ಎಂದರು.
ಹಣ ಬಿಡುಗಡೆ ಮಾಡಿ:
ಮತ್ತೊಂದೆಡೆ ಈ ಬಗ್ಗೆ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯೆಯಲ್ಲಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯ ಸರ್ಕಾರ ಹಾಲಿನ ಸಬ್ಸಿಡಿಯನ್ನು ಕೊಡದೆ ಹಾಲು ಉತ್ಪಾದಕರಿಗೆ ಮೋಸ ಮಾಡುತ್ತಿದೆ 700 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿರುವ ಸರ್ಕಾರಕ್ಕೆ ಆತ್ಮಸಾಕ್ಷಿ ಇದೆಯಾ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕೃಷಿ ಅನುದಾನಕ್ಕೆ ಶೇಕಡ 32ರಷ್ಟು ಕತ್ತರಿ ಹಾಕಲಾಯಿತು ಹಾಲು ಉತ್ಪಾದಕರಿಗೆ ಸಹಾಯಧನ ಏಳು ರೂಪಾಯಿಗೆ ಹೆಚ್ಚಳ ಮಾಡುವುದಾಗಿ ಹೇಳಿ ಮೋಸ ಮಾಡಲಾಯಿತು ಎಂದು ದೂರಿದ್ದಾರೆ.