ಬೆಂಗಳೂರು,ಜೂ.5-
ಮಹರ್ಷಿ ವಾಲ್ಮೀಕಿ ನಿಗಮದಲ್ಲಿನ ಅಕ್ರಮ ಹಣಕಾಸು ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ಅಧಿಕಾರಿಗಳು ಹಣ ವರ್ಗಾವಣೆಯಾಗಿದೆ ಎನ್ನಲಾದ ಆಂಧ್ರಪ್ರದೇಶ ಬ್ಯಾಂಕ್ ಅಧ್ಯಕ್ಷ ಸತ್ಯನಾರಾಯಣ ಹಿಟ್ಕಾರ್ ರನ್ನು ಬಂಧಿಸಿದ್ದಾರೆ.
ಇದೇ ವೇಳೆ ಸಚಿವ ನಾಗೇಂದ್ರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಾಗರಾಜ್ ನೆಕ್ಕಂಟಿ ಮತ್ತು ನಾಗೇಶ್ ಎಂಬುವರನ್ನು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆಗೊಳಪಡಿಸಿದ್ದಾರೆ
ಮಹರ್ಷಿ ವಾಲ್ಮೀಕಿ ನಿಗಮ ಮಂಡಳಿಯ ಅಧಿಕೃತ ಬ್ಯಾಂಕ್ ಖಾತೆಯಿಂದ ಆಂಧ್ರದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿತ್ತು. ಇದು ಅಕ್ರಮದ ಹಣ ಎಂಬ ಆರೋಪದ ಹಿನ್ನೆಲೆಯಲ್ಲಿ ಆಂಧ್ರದ ಫಸ್ಟ್ ಬ್ಯಾಂಕ್ ಅಧ್ಯಕ್ಷ ಸತ್ಯನಾರಾಯಣ ಹಿಟ್ಕಾರ್ ಅವರನ್ನು ಬಂಧಿಸಲಾಗಿದೆ. ಈ ಹಣ ನಾಗರಾಜ್ ನೆಕ್ಕಂಟಿ ಮತ್ತು ನಾಗೇಶ ಅಣತಿ ಮೇರೆಗೆ ಹಣ ವರ್ಗಾವಣೆಯಾಗಿರುವ ಅನುಮಾನ ಮೇರೆಗೆ ಅವರನ್ನೂ ವಶಕ್ಕೆ ಪಡೆದಿದ್ದಾರೆ.
ಚುನಾವಣಾ ಹಿನ್ನೆಲೆಯಲ್ಲಿ ಕರ್ನಾಟಕದ ಬೊಕ್ಕಸದಿಂದ ಆಂಧ್ರದಿಂದ ಹಣ ವರ್ಗಾವಣೆಯಾಗಿರುವ ಅನುಮಾನ ಮೂಡಿದ್ದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ. ಸದ್ಯ ಅದೇ ಆಯಾಮದಲ್ಲಿ ಎಸ್ ಐಟಿ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ.
ಈ ನಡುವೆ ನಿಗಮದಲ್ಲಿ ಅಕ್ರಮ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ನಿಗಮದಿಂದ ಅಕ್ರಮವಾಗಿ ವರ್ಗಾವಣೆ ಆಗಿದೆ ಎನ್ನಲಾದ 87 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಲು ಕಸರತ್ತು ನಡೆಸುತ್ತಿದೆ. ಮೊದಲ ಕಂತಿನಲ್ಲಿ 26 ಕೋಟಿ ವಾಪಸ್ ಆಗಿದೆ ಎಂದು ಸಚಿವ ಬಿ ನಾಗೇಂದ್ರ ಹೇಳಿದ್ದರು.
ಎರಡನೇ ಕಂತಿನಲ್ಲಿ 42 ಕೋಟಿ ವಾಪಸ್ ಆಗಿದೆ ಎಂದು ಸಚಿವರ ಆಪ್ತ ವಲಯದ ಅಧಿಕಾರಿಗಳು ತಿಳಿಸಿದ್ದರು. ಆದರೆ, ಇದೀಗ ಇಷ್ಟು ಮೊತ್ತ ನಿಗಮಕ್ಕೆ ವಾಪಸ್ ಆಗಿಯೇ ಇಲ್ಲ ಎನ್ನಲಾಗುತ್ತಿದೆ.
ಈವರೆಗೂ ಕೇವಲ 5 ಕೋಟಿ ಮಾತ್ರ ವಾಪಸ್ ಆಗಿದೆ ಎಂಬ ಮಾಹಿತಿ ಸರ್ಕಾರ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ನಿರೀಕ್ಷಿತ ಹಣ ವಾಪಸ್ ಆಗದೆ, ಸಚಿವರು 26 ಕೋಟಿ ಬಂದಿದೆ ಎಂದಿದ್ದು ಯಾಕೆ ಎಂಬ ಅನುಮಾನಗಳು ಮೂಡಿವೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಬಿಜೆಪಿಯಿಂದ ಸರ್ಕಾರಕ್ಕೆ ಗಡುವು ನೀಡಿದ್ದು, ಹೀಗಾಗಿ ಸಚಿವ ತಲೆದಂಡ ಬಹುತೇಕ ಖಚಿತ ಎನ್ನಲಾಗಿದೆ.
Previous Articleಶತ್ರು ಭೈರವಿಯಾಗ ಮಾಡಿ ಗೆದ್ದಿಲ್ಲ.
Next Article ವಾಲ್ಮೀಕಿ ಹಗರಣ-CBI ಎಫ್ ಐ ಆರ್ ದಾಖಲು.