ಬೆಂಗಳೂರು,ಫೆ.8-
ರಾಜ್ಯ ವಿಧಾನಸಭೆಯ ಪ್ರಸಕ್ತ ಸರ್ಕಾರದ ಕೊನೆಯ ಹಾಗೂ ವರ್ಷದ ಮೊದಲ ಅಧಿವೇಶನ ನಾಳೆಯಿಂದ ಆರಂಭವಾಗಲಿದೆ. ಉಭಯ ಸದನಗಳ ಜಂಟಿ ಅಧಿವೇಶನ ರಾಜ್ಯಪಾಲರ ಭಾಷಣದೊಂದಿಗೆ ಆರಂಭವಾಗಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕಾವೇರಿದ ವಾಕ್ಸಮರಕ್ಕೆ ವೇದಿಕೆಯಾಗಲಿದೆ. ಇದು ಚುನಾವಣಾ ವರ್ಷವಾಗಿರುವುದರಿಂದ ಪ್ರತಿಪಕ್ಷಗಳು ಸರ್ಕಾರದ ವೈಫಲ್ಯಗಳ ಬಗ್ಗೆ ಬೆಳಕು ಚೆಲ್ಲಲು ತುದಿಗಾಲಲ್ಲಿ ನಿಂತಿದ್ದರೆ, ಇದಕ್ಕೆ ತಕ್ಕ ತಿರುಗೇಟು ನೀಡುವ ಮೂಲಕ ತನ್ನ ಸಾಧನೆಗಳನ್ನು ಬಿಂಬಿಸಿಕೊಳ್ಳಲು ಸರ್ಕಾರ ಸಜ್ಜಾಗಿದೆ.
ಶುಕ್ರವಾರ 11 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಭಾಷಣದಲ್ಲಿ ಸರ್ಕಾರದ ಸಾಧನೆಗಳು ಹಾಗೂ ಮುಂಬರುವ ಬಜೆಟ್ ನಲ್ಲಿ ಪ್ರಕಟಿಸಲುದ್ದೇಶಿಸಿರುವ ಯೋಜನೆಗಳ ಪ್ರಸ್ತಾಪದೊಂದಿಗೆ ಕೇಂದ್ರ ಸರ್ಕಾರದ ಗುಣಗಾನವೂ ಇರಲಿದೆ.
ಸೋಮವಾರದಿಂದ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ. ಈ ವೇಳೆ ಸರ್ಕಾರದ ಮೇಲೆ ಕೇಳಿಬಂದಿರುವ ಕೆಲವು ಭ್ರಷ್ಟಾಚಾರದ ಆರೋಪಗಳ ಕುರಿತು ಪ್ರತಿಪಕ್ಷಗಳಾದ Congress ಮತ್ತು JDS ಮುಗಿಬೀಳಲು ಸಜ್ಜಾಗಿವೆ. ಗುತ್ತಿಗೆದಾರರ ಸಂಘ ಸರ್ಕಾರದ ಮೇಲೆ ಆರೋಪಿಸಿರುವ 40% ಕಮೀಷನ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (H.D.Kumaraswamy) ಸಿಡಿಸಿರುವ ಬ್ರಾಹ್ಮಣ ಸಿಎಂ ಹೇಳಿಕೆ, ಅಧಿಕಾರಿಗಳ ವರ್ಗಾವಣೆಯಲ್ಲಿ ಹಣ ವಸೂಲಿ, ಸ್ಯಾಂಟ್ರೊ ರವಿ (Santro Ravi) ಪ್ರಕರಣ ಸೇರಿದಂತೆ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ.
ಫೆಬ್ರವರಿ 17 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಬಜೆಟ್ ಮಂಡಿಸಲಿದ್ದಾರೆ.

