ಕರ್ನಾಟಕ : ಕನ್ನಡ ಸಿನಿಮಾ ಒಂದು ಕಾಲದ ಸೂಪರ್ ಸ್ಟಾರ್ ಶಶಿಕುಮಾರ್, ಬೆಳ್ಳಿ ತೆರೆಯ ಮೇಲೆ ಮಿಂಚಿದಷ್ಟೇ ವೇಗವಾಗಿ ರಾಜಕೀಯದಲ್ಲೂ ಮಿಂಚಿದರು. ಒಮ್ಮೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದ ಶಶಿಕುಮಾರ್ ನಂತರ ರಾಜಕೀಯದಲ್ಲಿ ಯಶಸ್ಸು ಸಾಧಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಸಂಯುಕ್ತ ಜನತಾದಳದಿಂದ ಸಂಸದರಾಗಿ ಆಯ್ಕೆಯಾಗಿದ್ದ ನಂತರದಲ್ಲಿ ಹಲವು ಪಕ್ಷಗಳಿಗೆ ಸೇರಿ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಚುನಾವಣಾ ರಾಜಕಾರಣದಲ್ಲಿ ಯಶಸ್ವಿಯಾಗಲಿಲ್ಲ.
ಒಮ್ಮೆ ಸಂಸದರಾಗಿದ್ದ ಶಶಿಕುಮಾರ್ ಹಲವಾರು ವಿವಾದಗಳನ್ನು ಮೈಮೇಲೆ ಎಳೆದುಕೊಂಡರು. ಸಂಸದರಾಗಿ ಎರಡು ದಶಕಗಳಾದರೂ ಅಂದು ಅವರನ್ನು ಆವರಿಸಿಕೊಂಡ ವಿವಾದಗಳು ಇನ್ನೂ ಬಗೆಹರಿದಿಲ್ಲ. ಇದೀಗ ಮತ್ತೊಂದು ವಿವಾದ ಇವರನ್ನು ಸುತ್ತಿಕೊಂಡಿದೆ.ಶಶಿಕುಮಾರ್ ಸಂಸದರಾಗಿದ್ದ ಸಂದರ್ಭದಲ್ಲಿ ಕರ್ನಾಟಕ ಭವನ ಬಳಕೆ ಮಾಡಿದ್ದರು. ಇದಕ್ಕೆ 3.72 ಲಕ್ಷ ರೂಪಾಯಿ ಬಾಡಿಗೆ ಕೊಡಬೇಕಿದೆ. ಇದಕ್ಕಾಗಿ ಕರ್ನಾಟಕ ಭವನ ಅಧಿಕಾರಿಗಳು ಹಲವು ಬಾರಿ ಪ್ರಯತ್ನಿಸಿದರೂ ಇನ್ನೂ ಬಾಡಿಗೆ ಪಾವತಿಸಿಲ್ಲ.
ಇದನ್ನು ಗಮನಿಸಿದ ಕಂದಾಯ ಇಲಾಖೆ ಇದೀಗ ಬಾಡಿಗೆ ವಸೂಲಿ ಮಾಡುವಂತೆ ರಾಜ್ಯ ಶಿಷ್ಟಾಚಾರದ ಅಧೀನ ಕಾರ್ಯದರ್ಶಿಗಳು ಏ.19 ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ಇದನ್ನು ಆಧರಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಾಜಿ ಸಂಸದರಿಂದ ಸರ್ಕಾರಕ್ಕೆ ಬರಬೇಕಿರುವ ಬಾಕಿ ವಸೂಲಿಗೆ ಪ್ರಯತ್ನ ಆರಂಭಿಸಿದ್ದಾರೆ..