ಬೆಂಗಳೂರು,ಮಾ.26:
ರಾಜ್ಯ ರಾಜಕಾರಣದಲ್ಲಿ ಹನಿ ಟ್ರ್ಯಾಪ್ ಪ್ರಕರಣ ಕೋಲಾಹಲ ಸೃಷ್ಟಿಸಿರುವ ಬೆನ್ನಲ್ಲೇ ಲೋಕೋಪಯೋಗಿ ಮಂತ್ರಿ ಸತೀಶ್ ಜಾರಕಿಹೊಳಿ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ಅವರ ತಂದೆ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.
ವಿಧಾನಸಭೆ Election ಮುಗಿಯುತ್ತಿದ್ದಂತೆ ಅಧಿಕಾರ ಹಂಚಿಕೆ ಕುರಿತಾಗಿ ಒಪ್ಪಂದ ಏರ್ಪಟ್ಟಿದ್ದು ಎರಡು ವರ್ಷ ಅಧಿಕಾರ ಅವಧಿ ಪೂರ್ಣಗೊಳಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಮಾಡಬೇಕು ಎಂಬ ವಿಚಾರ ಚರ್ಚೆಯಲ್ಲಿರುವಾಗಲೇ ಈ ಭೇಟಿ ಮಹತ್ವ ಪಡೆದಿದೆ.
ಯಾವುದೇ ಕಾರಣಕ್ಕೂ ಉಪ ಮುಖ್ಯಮಂತ್ರಿಯಾಗಿರುವ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬಾರದು ಎಂದು ಲಾಭಿ ಮಾಡುತ್ತಿರುವ ಸತೀಶ್ ಜಾರಕಿಹೊಳಿ ಕೇಂದ್ರ ಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಈ ಕುರಿತಾಗಿಯೇ ಮಾತುಕತೆ ನಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಹನಿ ಟ್ರ್ಯಾಪ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇದರ ಹಿಂದಿರುವ ಸೂತ್ರದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿರುವ ಸತೀಶ್ ಜಾರಕಿಹೊಳಿ ಕಳೆದ ರಾತ್ರಿ ದೆಹಲಿಯಲ್ಲಿ ಹೈಕಮಾಂಡ್ ನಾಯಕರಾದ ವೇಣುಗೋಪಾಲ್ ಮತ್ತು ಸುರ್ಜೆವಾಲಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಹನಿ ಟ್ರ್ಯಾಪ್ ಪ್ರಕರಣ ಕುರಿತು ಅವರಿಗೆ ಸಂಪೂರ್ಣ ಮಾಹಿತಿ ನೀಡಿದ ಸತೀಶ್ ಜಾರಕಿಹೊಳಿ ಇದರ ಹಿಂದೆ ರಾಜ್ಯ ಸರ್ಕಾರದ ಪೂರ್ವ ಪ್ರಭಾವಿ ಕಾಂಗ್ರೆಸ್ ಪಕ್ಷದ ಓರ್ವ ರಾಷ್ಟ್ರೀಯ ಮಟ್ಟದ ಹಿರಿಯ ನಾಯಕ ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಆತಿಥ್ಯ ವಿಭಾಗದ ವ್ಯಕ್ತಿಯೊಬ್ಬರು ಶಾಮೀಲಾಗಿದ್ದಾರೆ ಎಂದು ತಿಳಿಸಿರುವುದಾಗಿ ಗೊತ್ತಾಗಿದೆ.
ಇದರಲ್ಲಿ ಶಾಮೀಲಾಗಿರುವ ಎಲ್ಲರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿರುವ ಅವರು ಯಾವುದೇ ಕಾರಣಕ್ಕೂ ಅಧಿಕಾರ ಹಸ್ತಾಂತರದ ಪ್ರಕ್ರಿಯೆಗೆ ಕೈ ಹಾಕದಂತೆ ಸಲಹೆ ಮಾಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿದ ಕೆ ಸಿ ವೇಣುಗೋಪಾಲ್ ಈ ಕುರಿತಂತೆ ರಾಹುಲ್ ಗಾಂಧಿ ಸೋನಿಯಾ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ತೀರ್ಮಾನ ಕೈಗೊಳ್ಳಲಿದ್ದಾರೆ. ಹೀಗಾಗಿ ಎಲ್ಲರೂ ಅವರ ನಿರ್ಧಾರಕ್ಕೆ ಕಾಯಬೇಕು ಎಂದು ತಿಳಿಸಿರುವುದಾಗಿ ಗೊತ್ತಾಗಿದೆ.
ಹೈಕಮಾಂಡ್ ಅಧಿಕಾರ ಹಸ್ತಾಂತರ ಕುರಿತಾಗಿ ಯಾವುದೇ ಸ್ಪಷ್ಟ ಭರವಸೆ ನೀಡದ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಅವರು ಮತ್ತೊಮ್ಮೆ ಪ್ರಮುಖ ನಾಯಕರ ನಿಯೋಗದೊಂದಿಗೆ ದೆಹಲಿಗೆ ಬರುವುದಾಗಿ ತಿಳಿಸಿದ್ದು ರಾಹುಲ್ ಗಾಂಧಿ ಅವರ ಭೇಟಿಗೆ ಸಮಯ ಕೋರಿದ್ದಾರೆ.
ಇದಾದ ಬಳಿಕ ಅವರು ನೇರವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ನಿವಾಸಕ್ಕೆ ಆಗಮಿಸಿದ್ದು ಅವರೊಂದಿಗೆ ಸುಧೀರ್ಘ ಮಾತುಕತೆ ನಡೆಸಿದ್ದಾರೆ ಈ ವೇಳೆ ಮಾಜಿ ಪ್ರಧಾನಿ ದೇವೇಗೌಡ ಕೂಡ ಇವರ ಜೊತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ನಡೆಸಿದ್ದಾರೆ.
ಈ ಮಾತುಕತೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ವಾಗದಂತೆ ನೋಡಿಕೊಳ್ಳಿ ಈ ವಿಷಯದಲ್ಲಿ ನೀವುಗಳು ತೆಗೆದುಕೊಳ್ಳುವ ತೀರ್ಮಾನದ ಜೊತೆ ನಾವಿದ್ದೇವೆ ಎಂದು ಉಭಯ ನಾಯಕರು, ಭರವಸೆ ನೀಡಿರುವುದಾಗಿ ಗೊತ್ತಾಗಿದೆ.
ಡಿಕೆ ಶಿವಕುಮಾರ್ ಅವರಿಗೆ ರಾಜ್ಯವನ್ನು ಮುನ್ನಡೆಸುವ ಮುತ್ಸದ್ದಿತನ ಇಲ್ಲ. ಎಲ್ಲವನ್ನು ಸಂಪೂರ್ಣ ಹಣದಲ್ಲೇ ಅಳೆದು ತೂಗುತ್ತಾರೆ, ಇವರು ಮುಖ್ಯಮಂತ್ರಿಯಾದರೆ ಯಾವುದೇ ಮಂತ್ರಿ ಮತ್ತು ಶಾಸಕರಿಗೆ ಸ್ವಾತಂತ್ರ್ಯ ಇರುವುದಿಲ್ಲ ಎಲ್ಲೆಡೆ ದ್ವೇಷದ ರಾಜಕಾರಣ ಇಲ್ಲವೇ ಪಿತೂರಿ ಮಾಡಿ ಯಾವುದಾದರೂ ಬಲೆಯಲ್ಲಿ ಸಿಲುಕಿಸುವ ಪ್ರಯತ್ನಗಳು ನಡೆಯುತ್ತವೆ ಹೀಗಾಗಿ ಎಚ್ಚರದಿಂದ ಇರುವಂತೆ ದೇವೇಗೌಡರು ಸಲಹೆ ಮಾಡಿರುವುದಾಗಿ ತಿಳಿದು ಬಂದಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲಿ ನಮ್ಮದೇನೂ ತಕರಾರಿಲ್ಲ ಈ ಅವಧಿಯಲ್ಲ ಮುಂದಿನ ಅವಧಿಗೂ ಅವರೇ ಮುಖ್ಯಮಂತ್ರಿ ಆಗಿರಲಿ ಆದರೆ ಯಾವುದೇ ಕಾರಣಕ್ಕೂ ಡಿಕೆ ಶಿವಕುಮಾರ್ ಅವರಿಗೆ ಈ ಹುದ್ದೆ ಸಿಗಬಾರದು ಅದಕ್ಕಾಗಿ ತಮ್ಮ ಪಕ್ಷ ಯಾವುದೇ ನಿರ್ಧಾರ ಬೇಕಾದರೂ ತೆಗೆದುಕೊಳ್ಳಲಿದೆ ಎಂದು ಮನವರಿಕೆ ಮಾಡಿಕೊಟ್ಟಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ತಮ್ಮ ಪಕ್ಷದ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರವಾನಿಸುವಂತೆ ಹೇಳಿರುವ ದೇವೇಗೌಡರು ಎಂತಹದೇ ಪ್ರಸಂಗ ಬಂದರೂ ಅಧಿಕಾರ ಹಸ್ತಾಂತರಿಸಬಾರದು ಹೇಳಿರುವ ಹಾಗೆ ತಿಳಿಸುವಂತೆ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ