ಬೆಂಗಳೂರು,ಮಾ.27:
ರಾಜ್ಯದ ಪರಿಶಿಷ್ಟ ಜಾತಿ ಮತ್ತು ವರ್ಗದವರು ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಒಳ ಮೀಸಲಾತಿಯ ತೀರ್ಮಾನ ಇನ್ನೂ ಕೆಲವು ತಿಂಗಳುಗಳ ಕಾಲ ಹೊರಬೀಳಲು ಸಾಧ್ಯವಿಲ್ಲ.
ಒಳ ಮೀಸಲಾತಿ ನೀಡುವ ಸಂಬಂಧ ಅಧ್ಯಯನ ನಡೆಸಿ ವರದಿ ನೀಡಲು ನೇಮಿಸಲಾಗಿರುವ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಆಯೋಗ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಇದರಲ್ಲಿ ಒಳ ಮೀಸಲಾತಿ ನೀಡಲು ಬೇಕಾದ ಅಂಕಿ ಅಂಶಗಳ ಸಂಗ್ರಹಕ್ಕೆ ಕಾಲಾವಕಾಶ ಬೇಕಾಗಿದೆ ಎಂದು ತಿಳಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಒಳ ಮೀಸಲಾತಿ ನೀಡಲು ಕೆಲವು ಜಾತಿಗಳ ಬಗ್ಗೆ ಮರು ಸಮೀಕ್ಷೆ ನಡೆಸಬೇಕಾದ ಅಗತ್ಯವಿದೆ ಎಂದು ಹೇಳಿದೆ.
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯ ಎಡಗೈ ಮತ್ತು ಬಲಗೈ ಎಂದು ಕರೆಯಲಾಗುವ ಸಮುದಾಯದವರು ತಮ್ಮ ಜಾತಿಯ ಹೆಸರಿನಲ್ಲಿ ಕೆಲವು ಕಡೆ ಆದಿ ಕರ್ನಾಟಕ,ಆದಿ ದ್ರಾವಿಡ, ಆದಿ ಆಂಧ್ರ ಎಂದು ನಮೂದಿಸಿದ್ದು ಈ ಸಮುದಾಯವನ್ನು ಒಂದೊಂದು ಪ್ರದೇಶದಲ್ಲಿ ಒಂದೊಂದು ಜಾತಿ ಎಂದು ಗುರುತಿಸಲಾಗುತ್ತಿದೆ ಹೀಗಾಗಿ ಈ ರೀತಿ ನಮೂದಿಸಿರುವ ವ್ಯಕ್ತಿಗಳ ಉಪಜಾತಿ ಪತ್ತೆ ಕಾರ್ಯ ಕಷ್ಟವಾಗಿದೆ ಎಂದು ತಿಳಿಸಿದೆ.
ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ಹೊಸದಾದ ಸಮೀಕ್ಷೆ ನಡೆಸಿ ದತ್ತಾಂಶವನ್ನು ಸಂಗ್ರಹಿಸಬೇಕು ಎಂದು ತಿಳಿಸಿದೆ.
ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧನಗಳನ್ನು ಬಳಸಿ 30 ರಿಂದ 40 ದಿವಸಗಳೊಳಗೆ ಹೊಸದಾದ ಸಮೀಕ್ಷೆಯನ್ನು ನಡೆಸಬಹುದೆಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಆದರೆ,ಹೊಸದಾದ ಸಮೀಕ್ಷೆ ನಡೆಸಲು ಅಗತ್ಯವಿರುವ ಪ್ರಶ್ನಾವಳಿಯನ್ನು ಸಿದ್ಧಪಡಿಸಬೇಕು, ಯಾವ ಸಂಸ್ಥೆಯಿಂದ ಸಮೀಕ್ಷೆ ನಡೆಸಬೇಕು, ಸಮೀಕ್ಷೆ ಮಾಡುವ ಸಿಬ್ಬಂದಿಗೆ ತರಬೇತಿ, ಅಗತ್ಯವಿರುವ ಸಂಪನ್ಮೂಲಗಳ ಕ್ರೋಢೀಕರಣ ಇತ್ಯಾದಿಗಳ ಉಸ್ತುವಾರಿ ನೋಡಿಕೊಳ್ಳಲು ಉನ್ನತಮಟ್ಟದ ಸಮಿತಿಯೊಂದನ್ನು ರಚಿಸುವುದು ಸೂಕ್ತವೆಂದು ಆಯೋಗವು ಅಭಿಪ್ರಾಯಪಡುತ್ತದೆ.
ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ
ಹೊಸ ಸಮೀಕ್ಷೆಯಿಂದ ಸಂಗ್ರಹಿಸಿದ ದತ್ತಾಂಶದ ಆಧಾರದ ಮೇಲೆ ಈ ವರದಿಯಲ್ಲಿ ತಿಳಿಯಪಡಿಸಿರುವ ಮಾನದಂಡಗಳಂತೆ ಪರಿಶಿಷ್ಟ ಜಾತಿಯ ಉಪಜಾತಿಗಳ ವರ್ಗೀಕರಣ ಮಾಡಿ ಲಭ್ಯವಿರುವ ಮೀಸಲಾತಿ ಪ್ರಮಾಣವನ್ನು ಆದ್ಯತೆಯ ಮೇಲೆ ಹಂಚಿಕೆ ಮಾಡಬೇಕು ಎಂದು ಹೇಳಿದೆ.
ವರದಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾಯಮೂರ್ತಿ ನಾಗ ಮೋಹನ್ ದಾಸ್, ಮಧ್ಯಂತರ ವರದಿ ಕೊಡಿ ಎಂದು ಸರ್ಕಾರ ಕೇಳಿರಲಿಲ್ಲ. ಆದರೂ ನಾವು ಸುಮಾರು 104 ಪುಟಗಳ ವರದಿ ಕೊಟ್ಟಿದ್ದೇವೆ’ ಈ ವರದಿ ಮೇಲೆ ಸರ್ಕಾರ ಏನು ತೀರ್ಮಾನ ಮಾಡುತ್ತೊ ನೋಡೋಣ’ ಎಂದರು.
ಉದ್ಯೋಗಕಾಂಕ್ಷಿಗಳಿಗೆ ಅನ್ಯಾಯ ಆಗಬಾರದು. ಅವರಿಗೆ ಶಾಶ್ವತವಾದ ಪರಿಹಾರ ಕೊಡಬೇಕು. ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ. ವರದಿ ಬಗ್ಗೆ ಸರ್ಕಾರ ಏನೂ ಉತ್ತರ ಕೊಟ್ಟಿಲ್ಲ. ನೇಮಕಾತಿ ಬಗ್ಗೆ ನಾವು ಏನೂ ಸಲಹೆ ಕೊಟ್ಟಿಲ್ಲ’ ಎಂದು ಹೇಳಿದರು
ಈ ವೇಳೆ ಸಮಾಜ ಕಲ್ಯಾಣ ಸಚಿವ ಎಚ್. ಸಿ. ಮಹದೇವಪ್ಪ, ಆಹಾರ ಸಚಿವ ಕೆ. ಎಚ್.ಮುನಿಯಪ್ಪ, ಅಬಕಾರಿ ಸಚಿವ ತಿಮ್ಮಾಪುರ, ಮಾಜಿ ಸಚಿವ ಎಚ್.ಆಂಜನೇಯ ಇದ್ದರು