ಬೆಂಗಳೂರು,ಸೆ.27:
ನಿವೇಶನ ಹಂಚಿಕೆ ಕರ್ಮಕಾಂಡ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಾದ ನಂತರವೂ ಹೈಕಮಾಂಡ್ ಅವರ ಬೆಂಬಲಕ್ಕೆ ಧಾವಿಸಿದೆ. ಇದೊಂದು ರಾಜಕೀಯ ಪ್ರೇರಿತ ಪ್ರಕರಣವಾಗಿದ್ದು ಇದರ ವಿರುದ್ಧ ಕಾನೂನು ಮತ್ತು ರಾಜಕೀಯ ಹೋರಾಟ ಮುಂದುವರಿಸಲು ಪಕ್ಷ ತೀರ್ಮಾನಿಸಿದೆ.
ಪಕ್ಷದ ನಿರ್ಧಾರವನ್ನು ಸುದ್ದಿಗಾರರಿಗೆ ತಿಳಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ವಿರುದ್ಧ ಎಫ್ ಐ ಆರ್ ದಾಖಲಾದ ಮಾತ್ರಕ್ಕೆ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಗೋದ್ರಾ ಪ್ರಕರಣದಲ್ಲಿ ಅಂದು ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ, ಗೃಹ ಮಂತ್ರಿ ಆಗಿದ್ದ ಅಮಿತ್ ಶಾ ವಿರುದ್ಧ ಎಫ್ಐಆರ್ ದಾಖಲಾಗಿತ್ತು ಅಂದು ಅದಕ್ಕಾಗಿ ಅವರು ರಾಜೀನಾಮೆ ಕೊಟ್ಟಿದ್ದರಾ ಎಂದು ಪ್ರಶ್ನಿಸಿದರು.
ಈ ಪ್ರಕರಣವನ್ನು ಇಟ್ಟುಕೊಂಡು ಬಿಜೆಪಿ ಕಾಂಗ್ರೆಸ್ ಪಕ್ಷ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ನಡೆಸಿದೆ. ಇದನ್ನು ರಾಜಕೀಯವಾಗಿ ಎದುರಿಸಲಿದೆ ಸಿದ್ದರಾಮಯ್ಯ ಎಂದು ಇರಬಹುದು ನಾಳೆ ಇಲ್ಲದಿರಬಹುದು ಆದರೆ ಪಕ್ಷ ಶಾಶ್ವತವಾಗಿರುತ್ತದೆ ಹೀಗಾಗಿ ಪಕ್ಷದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನದ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಬಿಜೆಪಿಯ ಕೇಂದ್ರ ನಾಯಕರ ಗುರಿ ಸಿದ್ದರಾಮಯ್ಯ ಅವರಲ್ಲ ಬದಲಿಗೆ ಕಾಂಗ್ರೆಸ್ ಪಕ್ಷವಾಗಿದೆ. ವ್ಯಕ್ತಿಗತ ಗುರಿಯಿಲ್ಲ. ಏನೇ ಆದರೂ ಪಕ್ಷ ಮುಂದುವರೆಯುತ್ತದೆ. ನಮ ಪಕ್ಷವನ್ನು ಮುಗಿಸಲು ಮೂಲ ಮತಬ್ಯಾಂಕನ್ನು ನಾಶಪಡಿಸಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಈ ಎಲ್ಲಾ ಪ್ರತಿಭಟನೆಗಳು, ಚರ್ಚೆಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಉದ್ಯಮಿಗಳ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಲಾಗಿದೆ ಈ ದೊಡ್ಡ ಪ್ರಮಾಣದ ನಷ್ಟದ ಬಗ್ಗೆ ಚಕಾರವೆತ್ತದ ಬಿಜೆಪಿ ನಾಯಕರು ದೋಷಾರೋಪಣ ಪಟ್ಟಿಯೇ ಇಲ್ಲದ ಮುಡಾ ಹಗರಣದ ಬಗ್ಗೆ ದೇಶಾದ್ಯಂತ ಚರ್ಚೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
Previous Articleಸಿಎಂ ವಿರುದ್ಧ ಸಿಬಿಐ ತನಿಖೆಗೆ ಅರ್ಜಿ.
Next Article ಮುನಿರತ್ನ ಮನೆಗೆ ಪೊಲೀಸರ ಲಗ್ಗೆ.