ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಭಾಪತಿ ಸ್ಥಾನ ಮತ್ತು ಜೆಡಿಎಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಮಂಗಳವಾರ ಅವರು ಬಿಜೆಪಿ ಸೇರಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ನನ್ನ ಹುದ್ದೆಗೆ, ಪರಿಷತ್ ಸದಸ್ಯ ಸ್ಥಾನಕ್ಕೆ ಮತ್ತು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ಮಂಗಳವಾರ ಬಿಜೆಪಿಯನ್ನು ಸೇರ್ಪಡೆ ಆಗುತ್ತೇನೆ’ ಎಂದು ತಿಳಿಸಿದರು.
‘ನನ್ನ ಜತೆಗಿರುವ ಕೆಲವು ಕಾರ್ಯಕರ್ತರು ಪಕ್ಷ ಬದಲಿಸುವಂತೆ ಒತ್ತಡ ಹೇರಿದ್ದರು. ಅನಿವಾರ್ಯವಾಗಿ ಬಿಜೆಪಿ ಸೇರುತ್ತಿದ್ದೇನೆ. ಬಿಜೆಪಿಯಲ್ಲಿ ಯಾವುದೇ ಹುದ್ದೆಯ ಬಗ್ಗೆ ಚರ್ಚೆ ಮಾಡಿಲ್ಲ’ ಎಂದು ಅವರು ಹೇಳಿದರು.
‘ಜೆಡಿಎಸ್‌ನಲ್ಲಿ ದೇವೇಗೌಡ ಮಾರ್ಗದರ್ಶನದಲ್ಲಿ ನಾನು ಬೆಳೆದೆ. ದೇವೇಗೌಡರ ಕುಟುಂಬ ನನ್ನನ್ನು ಅವರ ಕುಟುಂಬದ ಸದಸ್ಯರಂತೇ ನೋಡಿಕೊಂಡರು. ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡುವ ಧೈರ್ಯ ಇಲ್ಲದ ಕಾರಣ ಅವರನ್ನು ಭೇಟಿ ಮಾಡಿಲ್ಲ. ಅವರಿಗೊಂದು 10 ಪುಟಗಳ ಪತ್ರವನ್ನು ಬರೆದಿದ್ದೇನೆ. ಕುಮಾರಸ್ವಾಮಿ ಅವರಿಗೆ ರಾಜೀನಾಮೆ ವಿಷಯ ತಿಳಿಸಿದ್ದು, ಅವರನ್ನು ನನ್ನನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇಬ್ಬರ ಬಗ್ಗೆಯೂ ಬೇಸರವಿಲ್ಲ. ದೇವೇಗೌಡರ ಮಾರ್ಗದರ್ಶನ ಮುಂದೆಯೂ ಬೇಕು’ ಎಂದು ಹೊರಟ್ಟಿ ತಿಳಿಸಿದರು.
ಸಭಾಪತಿಯಾಗಿ ಒಟ್ಟು 30 ಸಭೆಗಳನ್ನು ಮಾಡಿದ್ದು, ಏನೆಲ್ಲ ಸಭೆಗಳನ್ನು ಮಾಡಿದ್ದೇನೆ. ಅದರ ಪರಿಣಾಮಗಳೇನು ಎಂಬ ಬಗ್ಗೆ ಪುಸ್ತಕ ಪ್ರಕಟಿಸುತ್ತಿರುವುದಾಗಿಯೂ ಅವರು ಹೇಳಿದರು