ಬೆಂಗಳೂರು,ಜು.26-ನಾನು ಎರಡು ತಿಂಗಳು ಇರುವುದಿಲ್ಲ. ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ ಎಂದು ಹೇಳುವ ವೀಡಿಯೋವನ್ನು ಮೆಸೆಂಜರ್ ಗ್ರೂಪ್‍ವೊಂದರಲ್ಲಿ ಹರಿಬಿಟ್ಟ ಸುಳಿವು ಆಧರಿಸಿ ಶಂಕಿತ ಉಗ್ರ ಅಖ್ತರ್ ನನ್ನು ಬಂಧಿಸಲಾಗಿದೆ.
ವೀಡಿಯೋ ಮತ್ತು ಮೆಸೇಜ್‍ಗಳನ್ನು ಬಳಿಕ ಅಖ್ತರ್ ಡಿಲೀಟ್ ಕೂಡ ಮಾಡಿದ್ದ. ಆದರೆ ಈ ಮೇಸೆಜ್ ಬೆನ್ನತ್ತಿದ್ದ ಕೇಂದ್ರ ಗುಪ್ತಚರ ಇಲಾಖೆಯು 15 ದಿನಗಳ ಕಾಲ ಆತನ ಚಲನವಲನಗಳನ್ನು ಕಲೆ ಹಾಕಿ ನೀಡಿದ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಅಖ್ತರ್ ನನ್ನು ಬಂಧಿಸಿದ್ದಾರೆ.
ಆಲ್ ಖೈದಾ ಉಗ್ರ ಸಂಘಟನೆ ಸೇರಿದಂತೆ ಬೇರೆ ಬೇರೆ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇದೀಗ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಸಿಸಿಬಿ ಪೊಲೀಸರಿಗೆ ಹುಸೇನ್ ಮಾಹಿತಿಯನ್ನು ನೀಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಆತನ ಮೊಬೈಲ್‍ನಲ್ಲಿ ಏನಾದರೂ ದಾಖಲೆಯಿದೆಯಾ ಎಂದು ನೋಡಿದ್ದಾರೆ. ಆ ಮೊಬೈಲ್‍ನಲ್ಲಿದ್ದ ಗಲಭೆ ವೀಡಿಯೋಗಳನ್ನು ನೋಡಿ ಒಮ್ಮೇಲೆ ಪೊಲೀಸರೇ ಶಾಕ್ ಆಗಿದ್ದಾರೆ.
ಗಲಭೆ ವಿಡಿಯೋ:
ಮೊಬೈಲ್ ತುಂಬೆಲ್ಲಾ ಬರೀ ಗಲಭೆ ದಾಳಿಯ ವಿಡಿಯೋಗಳಿದ್ದವು. ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿದ್ದ ದಾಳಿ, ಗಲಭೆಯ ವಿಡಿಯೋಗಳನ್ನು ಸಂಗ್ರಹಿಸಿಟ್ಟಿದ್ದ. ಆರ್ಟಿಕಲ್ 370 ಬಳಿಕ ನಡೆದ ಗಲಭೆಗಳು, ಇತ್ತೀಚೆಗೆ ಆದ ಕಾಶ್ಮೀರಿ ಪಂಡಿತರ ಹತ್ಯೆ ವಿಡಿಯೋಗಳು ಆತನ ಬಳಿ ಇದ್ದವು.
ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಬರದೇ ಇರುವ ಕೆಲವು ಪ್ರಚೋದನಾಕಾರಿ ವೀಡಿಯೋಗಳು ಆತನ ಬಳಿ ಇದ್ದವು.
ಕೇವಲ ವೀಡಿಯೋವೊಂದೇ ಅಲ್ಲದೇ ಕೆಲವೊಂದು ಉರ್ದು ಮತ್ತು ಅರೆಬಿಕ್‍ನಲ್ಲಿ ಬರೆದಿರುವ ಲೇಖನಗಳಿದ್ದವು. ಕೆಲವೊಂದು ಉರ್ದು ಪತ್ರಿಕೆಯ ತುಣುಕುಗಳು ಸಿಕ್ಕಿವೆ