ಬೆಂಗಳೂರು : ಮಹತ್ವದ ಬೆಳವಣಿಗೆಯೊಂದರಲ್ಲಿ 2016ರಲ್ಲಿ ರಚನೆ ಮಾಡಲಾಗಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಅಲ್ಲದೆ ಎಸಿಬಿಗೆ ನೀಡಲಾಗಿದ್ದ ಪೊಲೀಸ್ ಠಾಣೆ ಸ್ಥಾನಮಾನವನ್ನು ಮರಳಿ ಲೋಕಾಯುಕ್ತ ಸಂಸ್ಥೆಗೆ ನೀಡಿದ್ದು, ಎಸಿಬಿ ಲೋಕಾಯುಕ್ತ ಅಡಿಯಲ್ಲಿ ಕೆಲಸ ಮಾಡುವಂತೆ ಸೂಚಿಸಿದೆ.
ಸದ್ಯ ಎಸಿಬಿ ತನಿಖೆ ನಡೆಸುತ್ತಿರುವ ಎಲ್ಲಾ ಪ್ರಕರಣಗಳನ್ನು ತಕ್ಷಣವೇ ಲೋಕಾಯುಕ್ತಕ್ಕೆ ವರ್ಗಾಯಿಸುವಂತೆ ಆದೇಶಿಸಿದೆ.
ಕಳೆದ 2016ರ ಮಾರ್ಚ್‌ನಲ್ಲಿ ರಾಜ್ಯ ಸರ್ಕಾರ ಮಾಡಿದ್ದ ಎಸಿಬಿ ರಚನೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಅಧಿಕಾರವನ್ನು ಕರ್ನಾಟಕ ಲೋಕಾಯುಕ್ತದಿಂದ ಹಿಂಪಡೆದು ಹೊರಡಿಸಿದ ಅಧಿಸೂಚನೆಗಳನ್ನು ಪ್ರಶ್ನಿಸಿ ಸಮಾಜ ಪರಿವರ್ತನಾ ಸಮುದಾಯದ ಎಸ್ ಆರ್ ಹಿರೇಮಠ ಸೇರಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿಯ ರಿಟ್ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವೀರಪ್ಪ ಮತ್ತು ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಸ್ವತಂತ್ರವಾಗಿ ಎಸಿಬಿ ತನಿಖೆ ನಡೆಸುವುದಕ್ಕೆ ನ್ಯಾಯಾಲಯ ಕಡಿವಾಣ ಹಾಕಿದ್ದು, ಲೋಕಾಯುಕ್ತ ಸಂಸ್ಥೆ ಅಡಿಯಲ್ಲಿಯೇ ಎಸಿಬಿ ಕಾರ್ಯನಿರ್ವಹಿಸಬೇಕೆಂದು ಆದೇಶದಲ್ಲಿ ತಿಳಿಸಿದೆ.
ಲೋಕಾಯುಕ್ತಕ್ಕೆ ಪೊಲೀಸ್ ಠಾಣೆ ಸ್ಥಾನಮಾನವನ್ನು ನ್ಯಾಯಾಲಯ ಮರುಸ್ಥಾಪಿಸಿದ್ದು, ಎಸಿಬಿಯು ಲೋಕಾಯುಕ್ತ ಸಂಸ್ಥೆಯ ವ್ಯಾಪ್ತಿಯಲ್ಲಿಯೇ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದೆ. ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರನ್ನು ಅರ್ಹತೆ ಮೇಲೆ ನೇಮಕ ಮಾಡಬೇಕು ಜಾತಿ ಆಧರಿಸಿ ನೇನಕಕ್ಕೆ ಪರಿಗಣಿಸಬಾರದೆಂದೂ ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.
ಎಸಿಬಿ ವಜಾ: ತಜ್ಞರೊಂದಿಗೆ ಚರ್ಚಿಸಿ ಕ್ರಮ ಹೈಕೋರ್ಟ್ ಎಸಿಬಿ ರಚನೆ ವಜಾ ಮಾಡಿರುವ ವಿಷಯ ತಿಳಿದಿದೆ. ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡಲಾಗುವುದು. ಕೋರ್ಟ್ ಆದೇಶ ನೋಡಿದ ನಂತರ ಪ್ರತಿಕ್ರಿಯಿಸುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Previous Articleಅಲ್ಲೋಲ ಕಲ್ಲೋಲ ಸೃಷ್ಟಿಸಲಿರುವ ತೈವಾನ್-ಚೀನಾ ಬಿಕ್ಕಟ್ಟು..
Next Article ಮಳೆ ಹಾನಿ ಪ್ರದೇಶ ವೀಕ್ಷಣೆಗೆ ಟ್ರಾಕ್ಟರ್ ಏರಿ ಬಂದ MLC