ರಾಜ್ಯದಲ್ಲೆ ಅತ್ಯಂತ ಜಿದ್ದಾಜಿದ್ದಿನ ರಾಜಕೀಯ ಅಖಾಡವಾಗಿ ಗಮನಸೆಳೆಯುವ ಕ್ಷೇತ್ರ ಮಂಡ್ಯ ಜಿಲ್ಲೆಯ ನಾಗಮಂಗಲ. ಕಾವೇರಿ ತಪ್ಪಲಿನ ಈ ಕ್ಷೇತ್ರ ಮಳೆ ಬಂದರೆ ಮಲೆನಾಡು ಇಲ್ಲವಾದರೆ ಮರುಭೂಮಿ.
ರಾಜ್ಯದ ಯಾವುದೇ ಮೂಲೆಗೋದರೂ ನಾಗಮಂಗಲ ಮೂಲದ ಒಬ್ಬರಾದರೂ ನೋಡಲು ಸಿಗುತ್ತಾರೆ. ಹಾಗೇಯೇ ಯಾವುದೇ ಭಾಗದಲ್ಲಿದ್ದರೂ ಚುನಾವಣೆಗಳ ಸಮಯಕ್ಕೆ ಊರಿಗೆ ಬಂದು ಮತದಾನ ಮಾಡಿ ಹೋಗುವ ಪ್ರಜ್ಞಾವಂತ ಮತದಾರರು.
ಇಂತಹ ನಾಗಮಂಗಲದಲ್ಲಿ ಮುಂಬರುವ
ವಿಧಾನಸಭಾ ಚುನಾವಣೆಯ ಕಾವು ರಂಗೇರುತ್ತಿದೆ. ಹಾಲಿ ಶಾಸಕ ಜೆಡಿಎಸ್ ಸುರೇಶ್‌ಗೌಡ, ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅಖಾಡಕ್ಕೆ ಧುಮುಕಲು ಸಜ್ಜಾಗುತ್ತಿದ್ದು ಮೂವರಿಗೂ ಬರುವ
2023ರ ಚುನಾವಣೆ ಅಗ್ನಿಪರೀಕ್ಷೆಯಾಗಿದೆ.
ಈ ಮೂವರೂ ದಿಗ್ಗಜ ನಾಯಕರಿಗೆ ಸೆಡ್ಡು ಹೊಡೆಯಲು ಕ್ಷೇತ್ರಕ್ಕೆ ಹೊಸ ಮುಖಗಳಾಗಿ ಪರಿಚಿತರಾಗಿರುವ ಸಮಾಜ ಸೇವಕ ಫೈಟರ್ ರವಿ ಬಿಜೆಪಿಯಿಂದ ಮತ್ತು ಅನಿಕೇತನ್‌ಗೌಡ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಅಲ್ಲದೆ, ಕ್ಷೇತ್ರದ ಜನರ ವಿಶ್ವಾಸ ಗಳಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಪೈಟರ್ ರವಿ ತಮಗಿರುವ ರೌಡಿ ಇಮೇಜ್ ನಿಂದ ಹೊರಬಂದು ಸಮಾಜ ಸೇವೆ ಹೆಸರಲ್ಲಿ ಕ್ಷೇತ್ರಾದ್ಯಂತ ಭರಾಟೆಯ ಪ್ರವಾಸ ನಡೆಸಿದ್ದಾರೆ
ಮಾಜಿ ಶಾಸಕ ಶಿವರಾಮೇಗೌಡ ಅವರಂತೂ ಇದೇ ತಮ್ಮ ಕೊನೆಯ ಚುನಾವಣೆ ಎಂದು ಬಿಂಬಿಸುತ್ತಲೇ ಎಲ್ಲರಿಗಿಂತ ಸ್ವಲ್ಪ ಹೆಚ್ಚೆ ಎನಿಸುವ ರೀತಿಯಲ್ಲಿ ಓಡಾಡುತ್ತಿದ್ದಾರೆ. ಬಿಂಡಿಗನವಿಲೆ ಹೋಬಳಿಯಲ್ಲಿ ಹೆಚ್ಚಿನ ಪ್ರಭಾವ ಹೊಂದಿರುವ ಇವರು ಜೆಡಿಎಸ್ ಟಿಕೆಟ್ ಆಕಾಂಕ್ಷಿ.ಒಂದು ವೇಳೆ ಪಕ್ಷ ಟಿಕೆಟ್ ಕೊಡದೆ ಹೋದರೂ ಪಕ್ಷೇತರನಾಗಿ ಕಣದಲ್ಲಿರುತ್ತೇನೆ.ಎರಡು ಬಾರಿ ಪಕ್ಷೇತರನಾಗಿ ಗೆದ್ದಿರುವ ದಾಖಲೆ ತಮ್ಮದು ಎನ್ನುತ್ತಾರೆ
ಕಳೆದ 25ವರ್ಷಗಳಿಂದ ರಾಜಕೀಯ ಅಧಿಕಾರವಿಲ್ಲದೆ ಕೈಕಟ್ಟಿಕುಳಿತಿರುವ ಶಿವರಾಮೇಗೌಡ ತನ್ನ ವಿರೋಧಿಗಳನ್ನು ಶತಾಯಗತಾಯ ಸೋಲಿಸಿ ವಿಧಾನಸೌಧ ಪ್ರವೇಶಿಸುತ್ತೇನೆಂದು ಪಣತೊಟ್ಟು ತಮ್ಮ ರಾಜಕೀಯ ಜೀವನದ ಕೊನೆಯ ಹೋರಾಟಕ್ಕಿಳಿದಿದ್ದಾರೆ. ನಾಗಮಂಗಲ ವಿಧಾನಸಭಾ ಕ್ಷೇತ್ರದ ಪ್ರತಿ ಹಳ್ಳಿಗಳಿಗೂ ಲಗ್ಗೆಯಿಟ್ಟು ಹಳೆಯ ಬೆಂಬಲಿಗರನ್ನು ಹುರಿದುಂಬಿಸುವ ಜೊತೆಗೆ ಹೊಸ ಕಾರ್ಯಕರ್ತರನ್ನು ಹುಟ್ಟುಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ 47 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲನುಭವಿಸಿದ್ದ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ನಂತರದಲ್ಲಿ ನಡೆದ ಲೋಕಸಭಾ ಚುನಾವಣೆ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿಯೂ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಳ್ಳುವ ಮೂಲಕ ಜೆಡಿಎಸ್ ಪಕ್ಷದ ನಾಯಕರಿಗೆ ತೀವ್ರ ಮುಖಭಂಗ ಉಂಟುಮಾಡಿ ಜಿಲ್ಲೆ ಮತ್ತು ಕ್ಷೇತ್ರದೊಳಗೆ ತಮ್ಮ ವರ್ಚಸ್ಸು ಏನೆಂಬುದನ್ನು ವಿರೋಧಿಗಳಿಗೆ ತೋರಿಸಿಕೊಟ್ಟಿದ್ದಾರೆ.
ಇದೀಗ ನಾಗಮಂಗಲದಲ್ಲೇ ಮನೆ ಮಾಡಿ ವಾಸ್ತವ್ಯ ಹೂಡುವ ಮೂಲಕ ತಮ್ಮನ್ನು ಬೆಂಗಳೂರು ಗೌಡ ಎಂದು ಟೀಕಿಸುವವರಿಗೆ ಅದರ ಅವಕಾಶವಿಲ್ಲದಂತೆ ಮಾಡಿದ್ದಾರೆ ಇದಲ್ಲದೆ ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ದಿನೇಶ್‌ಗೂಳೀಗೌಡ ಮತ್ತು ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮಧು ಜಿ.ಮಾದೇಗೌಡರನ್ನು ತಮ್ಮ ರಾಜಕೀಯ ಚಾಣಕ್ಯ ತಂತ್ರ ಉಪಯೋಗಿಸಿ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ ಎಂಬ ಮಾತನ್ನು ಹುಸಿಗೊಳಿಸಿದ್ದಾರೆ.ಇದೇ ಯಶಸ್ಸನ್ನು ಮುಂದಿಟ್ಟುಕೊಂಡು ಕ್ಷೇತ್ರಾದ್ಯಂತ ಸಂಚರಿಸುತ್ತಿದ್ದಾರೆ.ಮಾಜಿ ಸಿ ಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಸಿಕೊಂಡಿರುವುದು ಇವರಿಗೆ ಪ್ಲಸ್ ಪಾಯಿಂಟ್. ಕ್ಷೇತ್ರದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಕುರುಬ ಮತ್ತು ಅಲ್ಪಸಂಖ್ಯಾತ ಮತದಾರರ ಒಲವು ಇವರ ಪರವಾಗಿದೆ
ಜೆಡಿಎಸ್‌ನಿಂದ ಹಾಲಿ ಶಾಸಕ ಸುರೇಶ್‌ಗೌಡ ಅಭ್ಯರ್ಥಿಯಾಗುವುದು ಖಚಿತವಾಗಿದೆ. ಇವರೂ ಕೂಡ ನಾಗಮಂಗಲದಲ್ಲಿ ಮನೆ ಮಾಡಿದ್ದಾರೆ. ಈಗಾಗಲೇ ಕ್ಷೇತ್ರದಾದ್ಯಂತ ಬಿರುಸಿನ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ಜೊತೆಗೆ ಮತದಾರರ ಓಲೈಕೆ ಮಾಡುತ್ತಿದ್ದಾರೆ.
ಶಾಸಕ ಸುರೇಶ್‌ಗೌಡರು ಮೂಲ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಡೆಗಣಿಸಿ ತಮ್ಮ ಹಿಂಬಾಲಕರಿಗಷ್ಟೇ ಸೀಮಿತರಾಗಿದ್ದಾರೆ ಎಂದು ಸ್ವಪಕ್ಷದ ಮಾಜಿ ಎಂಎಲ್‌ಸಿ ಅಪ್ಪಾಜಿಗೌಡ, ಮನ್‌ಮುಲ್ ನಿರ್ದೇಶಕ ನೆಲ್ಲೀಗೆರೆ ಬಾಲು ಸೇರಿದಂತೆ ಹಲವು ಮುಖಂಡರಿಂದ ಅಪಸ್ವರದ ಮಾತುಗಳು ಕೇಳಿಬರುತ್ತಿವೆ. ಹಾಗಾಗಿ 2023 ಚುನಾವಣೆ ಶಾಸಕ ಸುರೇಶ್‌ಗೌಡರ ಪಾಲಿಗೆ ಕಬ್ಬಿಣದ ಕಡಲೆಯಾಗಬಹುದು.
ಜನರ ವಿಶ್ವಾಸ ಗಳಿಸಲು ಕಸರತ್ತು: ಕಳೆದ ಮೂರು ಚುನಾವಣೆ ಸಂದರ್ಭದಲ್ಲಿ ಮಾಡಿದ ಸಹಾಯಕ್ಕೆ ಪ್ರತಿಯಾಗಿ ಶಾಸಕ ಸುರೇಶ್‌ಗೌಡ ನನಗೆ ಮೋಸ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸುರೇಶ್‌ಗೌಡರನ್ನು ಸೋಲಿಸದೆ ನಾನು ವಿರಮಿಸುವುದಿಲ್ಲ ಎಂಬ ಹಠಕ್ಕೆ ಸಮಾಜಸೇವಕ ಫೈಟರ್ ರವಿ ಬಿದ್ದಿದ್ದಾರೆ. ಆರು ತಿಂಗಳ ಹಿಂದಷ್ಟೇ ಆಕಸ್ಮಿಕವಾಗಿ ಕ್ಷೇತ್ರಕ್ಕೆ ಬಂದಿರುವ ಫೈಟರ್‌ರವಿ ಸಮಾಜ ಸೇವೆ ಆರಂಭಿಸಿ ಎಲ್ಲಾ ಸರ್ಕಾರಿ ಶಾಲೆಗಳಿಗೆ ಮತ್ತು ಬೇಡಿಕೆಯಿರುವ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಅಗತ್ಯವಾದ ಪರಿಕರಗಳನ್ನು ಕಲ್ಪಿಸುವ ಜೊತೆಗೆ ಹಳ್ಳಿಗಳ ದೇವಸ್ಥಾನ ಅಭಿವೃದ್ಧಿಗೆ ಮತ್ತು ಕಷ್ಟಎಂದು ಬರುವ ಬಡಜನರಿಗೆ ಆರ್ಥಿಕ ನೆರವು, ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಗ್ರಾಮೀಣ ಪ್ರದೇಶದ ಕೆಲ ಹಳ್ಳಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ಮೂಲಕ ತಾಲೂಕಿನಾದ್ಯಂತ ಜನಮೆಚ್ಚುಗೆ ಗಳಿಸಲು ಪ್ರಯತ್ನ ನಡೆಸಿದ್ದಾರೆ.
ಕಳೆದ 2020ರ ಕೊರೋನಾ ಸಂದರ್ಭದಲ್ಲಿ ಕೊರೋನಾ ವಾರಿಯರ್‍ಸ್ಗಳಿಗೆ ಉಚಿತವಾಗಿ ಆರೋಗ್ಯ ಸುರಕ್ಷತಾ ಮತ್ತು ಔಷಧ ಕಿಟ್‌ಗಳನ್ನು ನೀಡುವ ಮೂಲಕ ಸಮಾಜ ಸೇವೆ ಮಾಡುತ್ತೇನೆಂದು ಬಂದಿದ್ದ ತಾಲೂಕಿನ ದೇವರಮಲ್ಲನಾಯ್ಕನಹಳ್ಳಿ ಗ್ರಾಮದ ದಿವಂಗತ ವಿ.ಎನ್.ಗೌಡರ ಮೊಮ್ಮಗ ಅನಿಕೇತನ್‌ಗೌಡ ಎಂಬ ಯುವಕ ಜಿದ್ದಾಜಿದ್ದಿನ ಚುನಾವಣಾ ಅಖಾಡದಲ್ಲಿ ಸೆಣಸಾಡುವುದು ಬಹಳ ಕಷ್ಟಎಂಬುದು ಗೊತ್ತಿದ್ದರೂ ಸಹ ಪಕ್ಷೇತರ ಅಭ್ಯರ್ಥಿಯಾಗಿ ನಾನೂ ಸಹ ಚುನಾವಣೆಗೆ ಸ್ಪರ್ಧಿಸುತ್ತೇನೆಂದು ಘೋಷಿಸಿದ್ದಾರೆ.
ಚುನಾವಣೆಗೆ ಇನ್ನೂ ಆರೇಳು ತಿಂಗಳಿರುವಾಗಲೇ ನಾಗಮಂಗಲ ಕ್ಷೇತ್ರದಲ್ಲಿ ಚುನಾವಣೆಯ ರಂಗು ಕಾವೇರುತ್ತಿದ್ದು, ಜನರಲ್ಲಿಯೂ ಸಹ ತೀವ್ರ ಕುತೂಹಲ ಮೂಡಿಸಿದೆ.
Previous ArticleAccident ಮರೆಮಾಚಲು ಕಲ್ಲುತೂರಾಟದ ಕಥೆ ಕಟ್ಟಿದ ಚಾಲಕ
Next Article New Year ಆಚರಣೆಗೆ Full Tough Rules