ಬೆಂಗಳೂರು, ಮಾ.9- ರಾಜ್ಯದಲ್ಲಿ ಅತ್ಯಧಿಕ ಕ್ಷೇತ್ರದಲ್ಲಿ ಗೆಲ್ಲಬೇಕೆಂದು ರಣತಂತ್ರ ರೂಪಿಸುತ್ತಿರುವ ಬಿಜೆಪಿ (BJP) ಅಭ್ಯರ್ಥಿಗಳ ಆಯ್ಕೆಗೆ ಪ್ರಕ್ರಿಯೆ ಆರಂಭಿಸುತ್ತಿದ್ದಂತೆ ಹಿರಿಯ ನಾಯಕರ ಭಿನ್ನಮತದ ಬೆದರಿಕೆ ತಲೆ ನೋವಾಗಿ ಪರಿಣಮಿಸಿದೆ.
ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿ ಈಗಾಗಲೇ ನಿವೃತ್ತಿ ಪೋಷಿಸಿರುವ ಶ್ರೀನಿವಾಸಪ್ರಸಾದ್, ಬಚ್ಚೇಗೌಡ, ಜಿ.ಎಸ್. ಬಸವರಾಜ್, ಶಿವಕುಮಾರ ಉದಾಸಿ, ಎ. ನಾರಾಯಣಸ್ವಾಮಿ ಅವರ ಕ್ಷೇತ್ರಗಳಿಗೆ ಬೇರೆ ಅಭ್ಯರ್ಥಿಗಳ ಹುಡುಕಾಟ ನಡೆದಿದ್ದು ಇಲ್ಲಿ ಟಿಕೆಟ್ ಗಾಗಿ ಪೈಪೋಟಿ ಆರಂಭವಾಗಿದೆ.
ಅದರಲ್ಲೂ ಶಿವಕುಮಾರ್ ಉದಾಸಿ ಕಣಕ್ಕೆ ಇಳಿಯುವುದಿಲ್ಲ ಎಂದು ಹೇಳಿರುವ ಹಾವೇರಿ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪಕ್ಷದ ಹೈಕಮಾಂಡ್ ಈ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ ಆದರೆ ಈ ಕ್ಷೇತ್ರದಿಂದ ಕಣಕ್ಕಿಳಿಯಲು ನಿರ್ಧರಿಸಿದ್ದ ಮಾಜಿ ಸಚಿವ ಬಿ ಸಿ ಪಾಟೀಲ್ ಮತ್ತು ತಮ್ಮ ಪುತ್ರವನ್ನು ಕಣಕ್ಕಿಳಿಸಲು ಪ್ರಯತ್ನ ನಡೆಸಿದ್ದ ಮಾಜಿ ಸಚಿವ ಈಶ್ವರಪ್ಪ ಅವರು ಹೈಕಮಾಂಡ್ ವಿರುದ್ಧ ಬಂಡಾಯದ ಬಾವುಟ ಹಾರಿಸಲು ಸಜ್ಜುಗೊಂಡಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಸಿ ಪಾಟೀಲ್ ಕಾಂಗ್ರೆಸ್ ತೊರೆದು ಬಂದ ತಮ್ಮಿಂದಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು ಈಗ ನಾವುಗಳು ಸೋತು ಮನೆಯಲ್ಲಿ ಕುಳಿತಿದ್ದೇವೆ ಹೀಗಾಗಿ ನನಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಹಾವೇರಿಯಿಂದ ಟಿಕೆಟ್ ಕೊಡಬೇಕು ಎಂದು ಬೇಡಿಕೆ ಮಂಡಿಸಿದ್ದೇನೆ ಎಂದು ತಿಳಿಸಿದರು.
ಹೈಕಮಾಂಡ್ ಈ ಕ್ಷೇತ್ರದಿಂದ ಸ್ಪರ್ಧಿಸಲು ತಮಗೆ ಟಿಕೆಟ್ ನೀಡಲಿದೆ ಎಂಬ ವಿಶ್ವಾಸವಿದೆ ಒಂದು ವೇಳೆ
ಅವರು ಟಿಕೆಟ್ ಕೊಡದೆ ಹೋದರೆ ಅವರ ದಾರಿ ಅವರಿಗೆ ನಮ್ಮ ದಾರಿ ನಮಗೆ ಎಂದು ಎಂದು ಹೇಳಿದರು.
ಪಕ್ಷೇತರ ಸ್ಪರ್ಧೆ:
ಮತ್ತೊಂದೆಡೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಕಟ್ಟು ಬಿತ್ತು, ಚುನಾವಣೆಯ ಅಖಾಡದಿಂದ ದೂರ ಉಳಿದಿದ್ದ ಮಾಜಿ ಸಚಿವ ಈಶ್ವರಪ್ಪ ಈ ಬಾರಿ ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಮ್ಮ ಪತ್ರ ಕಾಂತೇಶ್ ಅವರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಕಳೆದ ಆರು ತಿಂಗಳಿಂದ ತಮ್ಮ ಪುತ್ರ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಹೀಗಾಗಿ ಅವರಿಗೆ ಪಕ್ಷದ ಟಿಕೆಟ್ ನೀಡಬೇಕು ಎಂದು ಬೇಡಿಕೆ ಮಂಡಿಸಿದ್ದರು. ಆದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ ಅವರನ್ನು ಕಣಕ್ಕಿಳಿಸುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಆಕ್ರೋಶ ಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ರಾಜಕಾರಣದಲ್ಲಿ ಉನ್ನತ ಸ್ಥಾನಕ್ಕೆ ಇರುವ ತಮ್ಮ ಪುತ್ರನಿಗೆ ಇರುವ ಅಡ್ಡಿಗಳನ್ನು ನಿವಾರಿಸಲು ಮುಂದಾಗಿರುವ ಯಡಿಯೂರಪ್ಪ ಇದಕ್ಕಾಗಿ ಬಸವರಾಜ ಬೊಮ್ಮಾಯಿ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡುವ ತಂತ್ರ ಹೆಣದಿದ್ದಾರೆ ಎಂದು ಈಶ್ವರಪ್ಪ ಆಪಾದಿಸಿದ್ದಾರೆ.
ಯಡಿಯೂರಪ್ಪ ಅವರಿಗೆ ತಮ್ಮ ಪುತ್ರನಹಿತ ಮುಖ್ಯವಾದರೆ ಅವರ ಜೊತೆಯಲ್ಲಿ ರಾಜಕಾರಣ ಆರಂಭಿಸಿದ ನಮಗೂ ಕೂಡ ತಮ್ಮ ಪುತ್ರನ ರಾಜಕೀಯ ಭವಿಷ್ಯ ಮುಖ್ಯವಾಗಿದೆ ಹೀಗಾಗಿ ಲೋಕಸಭೆಯ ಟಿಕೆಟ್ ಕೊಡಬೇಕು ಒಂದು ವೇಳೆ ಪಕ್ಷ ಟಿಕೆಟ್ ನಿರಾಕರಿಸಿದರೆ ತಾವೇ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಬೆದರಿಕೆ ಹಾಕಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಅದೇ ರೀತಿಯಲ್ಲಿ ಬಿಜೆಪಿ ಹೈಕಮಾಂಡ್ ಗೆ ಚಿಕ್ಕೋಡಿ ದಾವಣಗೆರೆ ವಿಜಯಪುರ ಬಾಗಲಕೋಟೆ ಬೀದರ್ ಮತ್ತು ಮೈಸೂರು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಇಲ್ಲಿ ಹಾಲಿ ಸಂಸದರ ಜೊತೆಗೆ ಇತರೆ ಆಕಾಂಕ್ಷಿಗಳು ಪಟ್ಟು ಹಿಡಿದಿರುವುದು ಬಿಕ್ಕಟ್ಟಾಗಿ ಪರಿಣಮಿಸಿದೆ.
ಎರಡು ದಿನದಲ್ಲಿ ಪಟ್ಟಿ:
ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಅಭ್ಯರ್ಥಿಗಳ ಆಯ್ಕೆಗೆ ಹೈಕಮಾಂಡ್ ಪ್ರಕ್ರಿಯೆ ಆರಂಭಿಸಿದೆ ನಾಳೆ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯುತ್ತಿದ್ದು ಒಂದೆರಡು ದಿನಗಳಲ್ಲಿ ರಾಜ್ಯದ ಪಟ್ಟಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಬಿಜೆಪಿ ಟಿಕೇಟಿಗಾಗಿ ರಾಜ್ಯದಲ್ಲಿ ಸಾಕಷ್ಟು ಬೇಡಿಕೆ ಇದೆ ಹಲವಾರು ಮಂದಿ ಹಿರಿಯ ನಾಯಕರು ಕಣಕ್ಕೆ ಇಳಿಯಲು ಬಯಸಿದ್ದಾರೆ ಆದರೆ ಇದರಿಂದ ಯಾವುದೇ ಬಿಕ್ಕಟ್ಟು ನಿರ್ಮಾಣವಾಗಿಲ್ಲ ಎಲ್ಲರೂ ಕೂಡ ನರೇಂದ್ರ ಮೋದಿ ಅವರನ್ನು ಮತ್ತೊಂದು ಅವರಿಗೆ ಪ್ರಧಾನಿ ಮಾಡಲು ಪಣ ತೊಟ್ಟಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ 28 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು ಎನ್ನುವುದು ನಮ್ಮ ಕಾರ್ಯತಂತ್ರವಾಗಿದೆ ಈ ನಿಟ್ಟಿನಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಸುಮಾರು 20 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತಾದ ಚರ್ಚೆ ಪೂರ್ಣಗೊಂಡಿದ್ದು ಒಂದೆರಡು ದಿನಗಳಲ್ಲಿ ಪಟ್ಟಿ ಪ್ರಕಟಿಸಲಾಗುವುದು ಎಂದು ಹೇಳಿದರು.