ಬೆಂಗಳೂರು, ಮಾ.10- ರಾಜ್ಯದಲ್ಲಿ ಈ ಬಾರಿ ಅತ್ಯಧಿಕ ಸಂಖ್ಯೆಯಲ್ಲಿ ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕು ಎಂದು ರಣತಂತ್ರ ರೂಪಿಸುತ್ತಿರುವ ಬಿಜೆಪಿ ನಾಯಕತ್ವಕ್ಕೆ ಅಭ್ಯರ್ಥಿಗಳ ಆಯ್ಕೆ ದೊಡ್ಡ ಸವಾಲಾಗಿದೆ.
Election ವೇಳಾಪಟ್ಟಿ ಘೋಷಣೆ ಮಾಡುವ ಮುನ್ನವೇ ಅಭ್ಯರ್ಥಿಗಳ ಹೆಸರು ಪ್ರಕಟಿಸಲು ಮುಂದಾಗಿದ್ದ ಹೈಕಮಾಂಡ್ ಗೆ ರಾಜ್ಯದಲ್ಲಿ ತೀವ್ರಗೊಂಡಿರುವ ಬಣ ರಾಜಕಾರಣ ದೊಡ್ಡ ಸವಾಲಾಗಿದೆ.ನಾಲ್ಕೈದು ಬಣಗಳು ರಾಜ್ಯದಲ್ಲಿ ಸಕ್ರಿಯವಾಗಿದ್ದು ತಮ್ಮ ಅತ್ಯಾಪ್ತರಿಗೆ ಟಿಕೆಟ್ ಕೊಡಿಸಲು ಮುಂದಾಗಿವೆ.ಈ ಬಣ ರಾಜಕಾರಣದ ವಿರುದ್ಧ ಇದೀಗ ಕಾರ್ಯಕರ್ತರೇ ತಿರುಗಿ ಬಿದ್ದಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲೂ ಇದೇ ರೀತಿಯ ಬಣ ರಾಜಕಾರಣ ವಿಜೃಂಭಿಸಿದ್ದರಿಂದ ಪಕ್ಷಕ್ಕೆ ಸೋಲಾಯಿತು.ಈ ಅನುಭವದಿಂದಲೂ ನಾಯಕರು ಪಾಠ ಕಲಿತಿಲ್ಲ ಎಂದು ಹೇಳಿರುವ ಕಾರ್ಯಕರ್ತರ ಪಡೆ ಹೈಕಮಾಂಡ್ ಗೆ ವರದಿ ನೀಡಿದೆ.ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಅಭ್ಯರ್ಥಿಗಳ ಆಯ್ಕೆಗೆ ನಿಗದಿಪಡಿಸಿದ ಸಭೆ ಮುಂದೂಡಿತು ಎಂದು ಹೇಳಲಾಗುತ್ತಿದೆ.
ವಿಧಾನಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ಇದೀಗ ಮತ್ತೆ ಬಿಜೆಪಿ ಸೇರಿದ್ದಾರೆ ಅಷ್ಟೇ ಅಲ್ಲ ಲೋಕಸಭಾ ಚುನಾವಣೆ ಸ್ಪರ್ಧಿಸಲು ಉತ್ಸುಕರಾಗಿದ್ದು ಬೆಳಗಾವಿ ಅಥವಾ ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧ ಎಂದಿದ್ದಾರೆ.
ಹೈಕಮಾಂಡ್ ಹಾವೇರಿಯಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಣಕ್ಕಿಳಿಸಲು ಲೆಕ್ಕಾಚಾರ ಮಾಡಿದೆ.ಹೀಗಾಗಿ ಅವರು ಬೆಳಗಾವಿಯತ್ತ ಗಮನ ಕೇಂದ್ರೀಕರಿಸಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡಲು ಜಿಲ್ಲಾ ಘಟಕ ವಿರೋಧ ವ್ಯಕ್ತಪಡಿಸಿದೆ. ಸ್ಥಳೀಯರಿಗೆ ಯಾರಿಗಾದರೂ ಟಿಕೆಟ್ ನೀಡಬೇಕೆಂದು ಹೈಕಮಾಂಡ್ ಗೆ ಮನವಿ ಮಾಡಿದೆ.
ಚಿಕ್ಕೋಡಿಯಲ್ಲಿ ಹಾಲಿ ಸಂಸದ ಅಣ್ಣಾ ಸಾಹೆಬ್ ಜೊಲ್ಲೆಗೆ ಟಿಕೆಟ್ ನೀಡಲು ವಿರೋಧ ವ್ಯಕ್ತವಾಗಿದೆ. ಈ ಕ್ಷೇತ್ರದಿಂದ ಮಾಜಿ ಸಚಿವ ದಿವಂಗತ ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿಗೆ ಟಿಕೆಟ್‍ನೀಡಬೇಕೆಂಬ ಬೇಡಿಕೆ ಇದೆ.ಅಣ್ಣಾ ಸಾಹೇಬ್ ಜೊಲ್ಲೆ ಪರವಾಗಿ ಬಿಜೆಪಿ ಮುಖಂಡ ಬಿ.ಎಲ್.ಸಂತೋಷ್ ಲಾಬಿ ನಡೆಸಿದರೆ ರಮೇಶ್ ಕತ್ತಿ ಪರವಾಗಿ ಯಡಿಯೂರಪ್ಪ ಲಾಬಿ ಮಾಡಿದ್ದಾರೆ.
ಬೀದರ್ ನಲ್ಲೂ ಸಚಿವ ಭಗವಂತ ಕೂಬಾಗೆ ಟಿಕೆಟ್ ನೀಡಲು ಸ್ವಪಕ್ಷಿಯವರಿಂದಲೇ ವಿರೋಧ ವ್ಯಕ್ತವಾಗಿದೆ. ಒಂದು ವೇಳೆ ಕಾರ್ಯಕರ್ತರ ವಿರೋಧ ಕಟ್ಟಿಕೊಂಡು ಅವರಿಗೆ ಟಿಕೆಟ್ ಕೊಟ್ಟರೆ ನೋಟಾಕ್ಕೆ ಮತ ಹಾಕುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಇಲ್ಲಿಯೂ ಕೂಬಾ ಪರವಾಗಿ ಯಡಿಯೂರಪ್ಪ ಲಾಬಿ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ಬೆಳವಣಿಗೆಯಿಂದ ಶಾಸಕರಾದ ಪ್ರಭು ಚವ್ಹಾಣ್, ಬಸವ ಕಲ್ಯಾಣ ಶಾಸಕ ಶರಣು ಸಲಗಾರ ಮತ್ತಿತರರು ಚುನಾವಣಾ ಚಟುವಟಿಕೆಗಳಿಂದ ದೂರ ಉಳಿಯುವ ಬೆದರಿಕೆ ಹಾಕಿದ್ದಾರೆ.
ಈ ಬಾರಿ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಹಾಲಿ ಸಚಿವೆಯಾಗಿರುವ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಲು ಕ್ಷೇತ್ರದಲ್ಲಿ ಕಾರ್ಯಕರ್ತರ ಆಕ್ರೋಶ ಹೆಚ್ಚಾಗಿದೆ.