ಬೆಂಗಳೂರು,ಏ.15 – ಜಲಮಂಡಳಿಯಿಂದ ತೋಡಲಾಗಿದ್ದ ಗುಂಡಿಗೆ ಸ್ಕೂಟರ್ ನಲ್ಲಿ ತ್ರಿಬಲ್ ರೈಡಿಂಗ್ ನಲ್ಲಿ ಮೂವರು ವ್ಹೀಲಿಂಗ್ ಮಾಡಲು ಹೋಗಿ ಆಯತಪ್ಪಿ ಬಿದ್ದು ಓರ್ವ ಸಾವನ್ನಪ್ಪಿ ಮತ್ತಿಬ್ಬರು ಗಾಯಗೊಂಡಿರುವ ದಾರುಣ ಘಟನೆ ಕೆಂಗೇರಿ ಸಮೀಪದ ಕೊಮ್ಮಘಟ್ಟ ಸರ್ಕಲ್ನಲ್ಲಿ ನಿನ್ನೆ ರಾತ್ರಿ ನಡೆದಿದೆ.
ಜಗಜೀವನರಾಮನಗರದ ಸದ್ದಾಂ ಹುಸೇನ್ (20) ಸಾವನ್ನಪ್ಪಿದವರು, ಗಾಯಗೊಂಡಿರುವ ಉಮ್ರಾನ್ ಪಾಷಾ ಹಾಗೂ ಮುಬಾರಕ್ ಪಾಷಾ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಅನಿತಾ ಬಿ. ಹದ್ದಣ್ಣನವರ್ ತಿಳಿಸಿದ್ದಾರೆ.
ಜಗಜೀವನರಾಮನಗರದ ಮೃತ ಹಾಗೂ ಗಾಯಗೊಂಡಿರುವ ಮೂವರು ಸ್ನೇಹಿತರಾಗಿದ್ದರು, ರಾತ್ರಿ 9ರ ವೇಳೆ ವೇಳೆಗೆ ಸದ್ದಾಂ ಹುಸೇನ್ ತನ್ನ ಇನ್ನಿಬ್ಬರನ್ನು ಕೂರಿಸಿಕೊಂಡು ಒಂದೇ ಸ್ಕೂಟರ್ ನಲ್ಲಿ ಬರುವಾಗ ಕೊಮ್ಮಘಟ್ಟ ಬಳಿ ಜಲಮಂಡಳಿಯು ಪೈಪ್ ಕಾಮಗಾರಿಗಾಗಿ ತೋಡಿದ್ದ ಸುಮಾರು 10 ಅಡಿ ಗುಂಡಿಗೆ ಆಯತಪ್ಪಿ ಸ್ಕೂಟರ್ ಸಮೇತ ಬಿದ್ದಿದ್ದಾರೆ. ಪರಿಣಾಮ ಸದ್ದಾಂ ಹುಸೇನ್ ಸಾವನ್ನಪ್ಪಿದರೆ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಸ್ಥಳೀಯರ ನೆರವಿನಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೈಪ್‌ಲೈನ್ ಕಾಮಗಾರಿ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಯಾವುದೇ ಬ್ಯಾರಿಕೇಡ್ ಅಥವಾ ಸೂಚನಾ ಫಲಕ ಅಳವಡಿಸದಿರುವುದು ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಥಳಕ್ಕೆ ಕೆಂಗೇರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ,ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಹೇಳಿದರು.
ದುರ್ಘಟನೆಯ ಪ್ರತ್ಯಕ್ಷದರ್ಶಿಯೊಬ್ಬರು ಅಪಘಾತದ ಬಗ್ಗೆ ಮಾತನಾಡಿ ರಾತ್ರಿ 8:45ರ ಸಮಯದಲ್ಲಿ ನಾನು ಕೂಡ ಕೆಂಗೇರಿ ರಸ್ತೆಯಲ್ಲಿ ಬರುತ್ತಿದೆ. ನನ್ನನ್ನು ಓವರ್ ಟೇಕ್ ಮಾಡಿಕೊಂಡು ಮೂವರು ಯುವಕರು ಸ್ಕೂಟರ್‌ನಲ್ಲಿ ಬಂದರು. ಅದೇ ವೇಗದಲ್ಲಿ ವ್ಹೀಲಿಂಗ್ ಮಾಡುತ್ತಾ ಮುಂದೆ ಸಾಗುತ್ತಿದ್ದರು.
ವ್ಹೀಲಿಂಗ್ ಮಾಡುವ ವೇಳೆ ಸ್ಕೂಟರ್ ಹೆಡ್‌ಲೈಟ್ ಮೇಲಕ್ಕೆ ಹೋಗಿದೆ. ಆಗ ಗುಂಡಿ ಮುಂದಕ್ಕೆ ಇರುವುದು ಕಾಣಿಸದೇ ನೇರವಾಗಿ ಬಂದು ಒಳಗಡೆ ಬಿದ್ದಿದ್ದಾರೆ. ನಾವೇ ಮೇಲಕ್ಕೆ ಎತ್ತಿ, ಆಸ್ಪತ್ರೆಗೆ ಸೇರಿಸಿದ್ದೆವು. ಯುವಕರ ಪುಂಡಾಟಕ್ಕೆ ಜೀವ ತೆತ್ತಿದ್ದಾರೆ. ಜಲ ಮಂಡಳಿಯವರು ಬ್ಯಾರಿಕೇಡ್ ಹಾಕಿದ್ದರು. ಆದರೆ ಅವರು ವೇಗವಾಗಿ ಬಂದು ಬ್ಯಾರಿಕೇಡ್‌ಗೆ ಗುದ್ದಿ ಗುಂಡಿಗೆ ಬಿದ್ದಿದ್ದಾರೆ ಎಂದು ವಿವರಿಸಿದರು.
ಒಂದು ವರ್ಷದ ಹಿಂದೆ ಇದೇ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಸಂದರ್ಭದಲ್ಲಿ ಉಲ್ಲಾಳ ಕೆರೆ ಬಳಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದರು.