ಬೆಂಗಳೂರು, ಜೂ.10:
ಕೇಂದ್ರದಲ್ಲಿ ಮೂರನೇ ಬಾರಿಗೆ ಅಸ್ತಿತ್ವಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಸಂಪುಟ ಸೇರ್ಪಡೆಗೊಂಡಿದ್ದಾರೆ ಹೀಗಾಗಿ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಇವರ ಸ್ಥಾನಕ್ಕೆ ಹೊಸಬರನ್ನು ನೇಮಿಸಲು ಹುಡುಕಾಟ ನಡೆದಿದೆ.
ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ಈ ಬಾರಿ ಬ್ರಾಹ್ಮಣ ಸೇರಿದಂತೆ ಪ್ರಬಲ ಸಮುದಾಯಗಳಿಗೆ ಹೆಚ್ಚಿನ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಹಿಂದುಳಿದ ಸಮುದಾಯಕ್ಕೆ ನೀಡಲು ಹೈಕಮಾಂಡ್ ಮತ್ತು ಸಂಘ ಪರಿವಾರ ಚಿಂತನೆ ನಡೆಸಿದೆ.
ಸದ್ಯದಲ್ಲೇ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ Election ಸೇರಿದಂತೆ ಹಲವು ಚುನಾವಣೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ನೇಮಕಾತಿ ಮಾಡಲು ನಿರ್ಧರಿಸಿರುವ ಬಿಜೆಪಿ ಚಿಂತನಾ ತಂಡ ಎನ್ ಡಿ ಎ ಮೈತ್ರಿಕೂಟದ ಮಿತ್ರ ಪಕ್ಷಗಳ ಜೊತೆ ಉತ್ತಮ ಬಾಂಧವ್ಯ ಸಾಧಿಸುವಂತಹ ವ್ಯಕ್ತಿಗಾಗಿ ಹುಡುಕಾಟ ನಡೆಸಿದೆ.
ಮಿತ್ರ ಪಕ್ಷಗಳ ಜೊತೆಗೆ ಉತ್ತಮ ಸಂಪರ್ಕ ಹೊಂದುವುದರೊಂದಿಗೆ ಬಿಜೆಪಿ ಸಂಘಟನೆಗೂ ಹೆಚ್ಚಿನ ಆದ್ಯತೆ ನೀಡಬೇಕು ಈ ಮೂಲಕ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸುವುದರೊಂದಿಗೆ ದೇಶಾದ್ಯಂತ ಪಕ್ಷದ ಸಂಘಟನೆಯನ್ನು ಪ್ರಬಲವಾಗಿ ಸಂಘಟಿಸುವಂತಹ ಜಾಣ್ಮೆ ಮತ್ತು ತಾಳ್ಮೆ ಇರುವ ವ್ಯಕ್ತಿಗಾಗಿ ಶೋಧ ನಡೆಸಿದೆ.
ಉನ್ನತ ಮೂಲಗಳ ಪ್ರಕಾರ ಮಹಾರಾಷ್ಟ್ರ ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಹಾಗೂ ಪಕ್ಷದ ಹಾಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ವಿನೋದ ತಾವ್ಡೆ ಅವರ ಹೆಸರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕಾಗಿ ಪ್ರಮುಖವಾಗಿ ಕೇಳಿ ಬರುತ್ತಿದೆ.
ತಾವ್ಡೆ ಅವರು ಮಹಾರಾಷ್ಟ್ರದ ಪ್ರಬಲ ಮರಾಠ ಸಮುದಾಯಕ್ಕೆ ಸೇರಿದವರಾಗಿದ್ದು ಹಿಂದುಳಿದ ವರ್ಗಗಳ ಅಡಿಯಲ್ಲಿ ಬರಲಿದ್ದಾರೆ ಅಲ್ಲದೆ ಸದ್ಯದಲ್ಲೇ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆಗಳು ನಡೆಯಲಿವೆ ಇದರ ನಡುವೆ ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿಗಾಗಿ ಹೋರಾಟ ತೀವ್ರಗೊಂಡಿದೆ ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ತಾವ್ಡೆ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡುವುದು ಸೂಕ್ತ ಎಂಬ ಚಿಂತನೆ ನಡೆದಿದೆ.
ಸದ್ಯ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ತಾವ್ಡೆ ಅವರು, ಹಲವು ರಾಜ್ಯಗಳ ಉಸ್ತುವಾರಿಯಾಗಿ ಒಡಿಶಾ ರಾಜ್ಯದ ಚುನಾವಣಾ ತಂತ್ರಗಾರಿಕೆಯಲ್ಲಿ ತೊಡಗಿಕೊಂಡಿದ್ದರು. ಸದ್ಯ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಅವರು ಪಕ್ಷದ ಎಲ್ಲಾ ವಿದ್ಯಮಾನಗಳ ಬಗ್ಗೆ ಸಂಪೂರ್ಣ ಹಿಡಿತಗೊಂಡಿದ್ದು ದೇಶದ ಉದ್ದಗಲಕ್ಕೆ ನಾಯಕರ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.ಈ ಹಿನ್ನಲೆಯಲ್ಲಿ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಸಂಘ ಪರಿವಾರ ಒಲವು ಹೊಂದಿದೆ ಎಂದು ಹೇಳಲಾಗುತ್ತಿದೆ ಇವರ ಜೊತೆಯಲ್ಲಿ ಉತ್ತರ ಪ್ರದೇಶದ ಮತ್ತೊಬ್ಬ ಯುವ ಮುಖಂಡ ಸುನಿಲ್ ಬನ್ಸಾಲ್ ಅವರ ಹೆಸರು ಕೂಡ ಚರ್ಚೆಯಲ್ಲಿದೆ. ಇವರು ಕೂಡ ಹಿಂದುಳಿದ ಸಮುದಾಯಕ್ಕೆ ಸೇರಿದವರು ಎನ್ನಲಾಗುತ್ತಿದೆ.