ಬೆಂಗಳೂರು,ಜ.21-
ವ್ಹೀಲಿಂಗ್ ಮಾಡುವುದು ಜೀವಕ್ಕೆ ಅಪಾಯಕಾರಿ ಎಂದು ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದರೂ, ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ.
ಇದರಿಂದ ಎಚ್ಚೆತ್ತುಕೊಳ್ಳದ ವಾಹನ ಸವಾರರ ಮೇಲೆ ಸಮರ ಸಾರಿರುವ ಸಂಚಾರ ಪೊಲೀಸರು ಕಳೆದ ವರ್ಷ 532 ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಲ್ಲದೆ, ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ ಅಪ್ರಾಪ್ತ ದ್ವಿಚಕ್ರ ವಾಹನ ಸವಾರರ ಮೇಲೆ ದಾಖಲಾಗಿರುವ ಪ್ರಕರಣ ಐದು ಪಟ್ಟು ಹೆಚ್ಚಾಗಿದೆ.
ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದರೂ ದಿನೇ ದಿನೇ ನಗರದಲ್ಲಿ ವ್ಹೀಲಿಂಗ್ ಪ್ರಕರಣಗಳು ಅಧಿಕಗೊಂಡಿವೆ.
ಕಳೆದ 2024ರಲ್ಲಿ 532, 2023ರಲ್ಲಿ 219 ಹಾಗೂ 2022ರಲ್ಲಿ 283 ಕೇಸ್ ದಾಖಲಾಗಿವೆ. ಕಳೆದ ವರ್ಷ ದಾಖಲಾಗಿದ್ದ 532 ಪ್ರಕರಣಗಳಲ್ಲಿ 530 ದ್ವಿಚಕ್ರವಾಹನಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅಪ್ರಾಪ್ತ ಸವಾರರ ವಿರುದ್ಧ 2022ರಲ್ಲಿ 23 ಹಾಗೂ 2023ರಲ್ಲಿ 74 ಪ್ರಕರಣಗಳು ದಾಖಲಾಗಿವೆ. 2024ರಲ್ಲಿ ಈ ಸಂಖ್ಯೆಯಲ್ಲಿ 121 ಪ್ರಕರಣಗಳು ದಾಖಲಾಗಿದ್ದು, ಎರಡು ವರ್ಷಗಳಿಗೆ ಹೋಲಿಸಿದರೆ ಪ್ರಕರಣ ಸಂಖ್ಯೆಯಲ್ಲಿ ಐದು ಪಟ್ಟು ಏರಿಕೆಯಾಗಿದೆ. ಅಪಾಯಕಾರಿ ವ್ಹೀಲಿಂಗ್ ಕಾರ್ಯಾಚರಣೆ ವಿಶೇಷ ಕಾರ್ಯಾಚರಣೆ ನಡೆಸುವ ಪೊಲೀಸರು ಸಾಮಾಜಿಕ ಜಾಲತಾಣಗಳಾದ ಎಕ್ಸ್, ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ಗಳ ಮೂಲಕ ಸಾರ್ವಜನಿಕರು ಕಳುಹಿಸುವ ಸವಾರರ ವ್ಹೀಲಿಂಗ್ ವಿಡಿಯೋಗಳನ್ನ ಗಂಭೀರವಾಗಿ ಪರಿಗಣಿಸಿ ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಬಹುತೇಕ 14 ರಿಂದ 30 ವರ್ಷದೊಳಗಿನ ಸವಾರರೇ ವ್ಹೀಲಿಂಗ್ ಮಾಡಿ ಸಿಕ್ಕಿಬಿದ್ದಿದ್ದಾರೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದರು.
18 ವರ್ಷದೊಳಗಿನ ಅಪ್ರಾಪ್ತರಿಗೆ ದ್ವಿಚಕ್ರ ವಾಹನ ನೀಡಿದ ಪರಿಣಾಮ ಪೋಷಕರು ಅಥವಾ ಮಾಲೀಕರ ವಿರುದ್ಧ ಕಳೆದ ಮೂರು ವರ್ಷಗಳಲ್ಲಿ 172 ಕೇಸ್ಗಳು ದಾಖಲಾಗಿವೆ. 2021ರಲ್ಲಿ 22 ಹಾಗೂ 2024ರಲ್ಲಿ 79 ಪ್ರಕರಣ ದಾಖಲಾಗಿದ್ದು, ಈ ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ ದಾಖಲಾದ ಪ್ರಕರಣಗಳು ನಾಲ್ಕು ಪಟ್ಟು ಹೆಚ್ಚಳವಾಗಿವೆ. ಅಪ್ರಾಪ್ತರಿಗೆ ದ್ವಿಚಕ್ರ ವಾಹನ ಕೊಟ್ಟು ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಭಾರತೀಯ ಮೋಟಾರ್ ಕಾಯ್ದೆಯಡಿ (ಐಎಂವಿ) ಪ್ರಕರಣ ದಾಖಲಿಸಿಕೊಂಡು, ತಲಾ 25 ಸಾವಿರ ದಂಡ ವಿಧಿಸಲಾಗಿದೆ. ಅಲ್ಲದೆ, ಬಾಲಾಪರಾಧ ನ್ಯಾಯ (ಮಕ್ಕಳ ಆರೈಕೆ ಹಾಗೂ ರಕ್ಷಣೆ) ತಿದ್ದುಪಡಿ ಕಾಯ್ದೆಯಡಿ ಸಂಬಂಧಿಸಿದ ಪೊಲೀಸ್ ಠಾಣೆಗಳಲ್ಲಿ ಪೋಷಕ ಹಾಗೂ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಬಾಲ ನ್ಯಾಯಮಂಡಳಿಗೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ವಿಚಾರಣೆಯಲ್ಲಿ ತಪ್ಪು ಎಸಗಿರುವುದು ಸಾಬೀತಾದರೆ ಗರಿಷ್ಠ 3 ವರ್ಷ ಜೈಲುಶಿಕ್ಷೆ ಹಾಗೂ ದಂಡ ಕಟ್ಟಬೇಕಿದೆ ಎಂದು ತಿಳಿಸಿದ್ದಾರೆ.
ಅಪಾಯಕಾರಿ ವ್ಹೀಲಿಂಗ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ, ಶೈಕ್ಷಣಿಕ ಸಂಸ್ಥೆಗಳಿಗೂ ತೆರಳಿ ತಿಳುವಳಿಕೆ ನೀಡಲಾಗುತ್ತಿದೆ. ವ್ಹೀಲಿಂಗ್ ಮಾಡಿ ಸಿಕ್ಕಿಬಿದ್ದ ಅಪ್ರಾಪ್ತ ಸವಾರರ ಸಂಖ್ಯೆ ಅಧಿಕಗೊಂಡಿದ್ದು, ಈ ಸಂಬಂಧ ಪೋಷಕರ ವಿರುದ್ಧ ನಿರ್ಲಕ್ಷ್ಯ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ” ಎಂದು ತಿಳಿಸಿದ್ದಾರೆ