ಬಡ್ಡಿ ಹಾಕಿದರೆ 10 ವರ್ಷ ಜೈಲು.
Bengaluru:
ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ
ಮಿತಿಮೀರಿ ಬಡ್ಡಿ ವಿಧಿಸುವ ಲೇವಾದೇವಿಗಾರರಿಗೆ 10 ವರ್ಷ ಶಿಕ್ಷೆ ವಿಧಿಸುವ ಕಠಿಣ ಕಾನೂನು ಜಾರಿಗೆ ತೀರ್ಮಾನಿಸಿದೆ.
ಸದ್ಯ ಇರುವ ಕಾನೂನಿಗೆ ತಿದ್ದುಪಡಿ ಮಾಡುವ ಮೂಲಕ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಲೇವಾದೇವಿಗಾರರ ವಿರುದ್ಧ ನಿಯಂತ್ರಣಕ್ಕೆ ಇರುವ ಕಾನೂನನ್ನೇ ಪರಿಣಾಮಕಾರಿಯಾಗಿ ಪ್ರಯೋಗ ಮಾಡಲು ನಿರ್ಧರಿಸಲಾಗಿದೆ
ರಾಜ್ಯದಲ್ಲಿ ಇನ್ನು ಮುಂದೆ ಮಿತಿಮೀರಿ ಬಡ್ಡಿ ವಿಧಿಸುವ ಲೇವಾದೇವಿಗಾರರು, ಪಾನ್ ಬ್ರೋಕರ್ಸ್, ಯಾವುದೇ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ತಿದ್ದುಪಡಿ ತರಲು ಸಹಕಾರ ಇಲಾಖೆ ಮುಂದಾಗಿದೆ.
ಮಿತಿಮೀರಿ ಬಡ್ಡಿ ವಿಧಿಸುವ ಲೇವಾದೇವಿಗಾರರು, ಪಾನ್ ಬ್ರೋಕರ್ಸ್ ಸೇರಿ ಇತರ ಸಹಕಾರ ಸಂಘಗಳ ಮೇಲೆ ನಿಯಂತ್ರಣ ಹೇರಲು ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಕಾಯ್ದೆ-2004 ಕಾಯ್ದೆ ಜಾರಿಯಲ್ಲಿದೆ. ಇದರಡಿ ಮಿತಿಮೀರಿ ಬಡ್ಡಿ ವಿಧಿಸುವವರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ.
ಗರಿಷ್ಠ 10 ವರ್ಷ ಶಿಕ್ಷೆ:
ಈಗಿರುವ ಗರಿಷ್ಠ 3 ವರ್ಷ ಶಿಕ್ಷೆ ಪ್ರಮಾಣವನ್ನು ತಿದ್ದುಪಡಿ ತಂದು ಗರಿಷ್ಠ 10 ವರ್ಷಗಳವರೆಗೆ ಹೆಚ್ಚಿಸಲು ಸಿದ್ಧತೆ ನಡೆಸಲಾಗುತ್ತಿದೆ. ಜೊತೆಗೆ ಒಂದು ಲಕ್ಷಕ್ಕೂ ಅಧಿಕ ದಂಡ ವಿಧಿಸುವ ನಿಟ್ಟಿನಲ್ಲಿ ಚರ್ಚೆ ನಡೆಸುತ್ತಿದೆ. ಈ ಸಂಬಂಧ ಸಹಕಾರ ಸಚಿವ ಕೆ.ಎನ್.ರಾಜಣ್ಣ ಈಗಾಗಲೇ ಸಹಕಾರ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ, ಪೂರಕ ತಿದ್ದುಪಡಿ ತರಲು ಸಮಾಲೋಚನೆ ನಡೆಸಿದ್ದಾರೆ.
ಮುಂಬರುವ ಅಧಿವೇಶನದಲ್ಲಿ ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ (ತಿದ್ದುಪಡಿ) ಮಸೂದೆ ಮಂಡನೆ ಮಾಡಲು ಮುಂದಾಗಿದೆ. ಆ ಮೂಲಕ ಅಧಿಕ ಬಡ್ಡಿ ವಿಧಿಸುವವರ ಮೇಲೆ ಕಠಿಣ ಕಾನೂನು ಜಾರಿ ಮಾಡಲು ಸಹಕಾರ ಇಲಾಖೆ ತೀರ್ಮಾನಿಸಿದೆ.