ಬೆಂಗಳೂರು,ಮಾ.28:
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಪತಚ್ಯುತಗೊಳಿಸಬೇಕು ಎಂದು ನಡೆಸುತ್ತಿರುವ ಹೋರಾಟದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿರುವ ಭಿನ್ನಮತೀಯ ನಾಯಕರು ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ಆದೇಶ ವಾಪಸ್ ಪಡೆಯುವಂತೆ ಹೈಕಮಾಂಡ್ ಗೆ ಮನವಿ ಮಾಡಿದ್ದಾರೆ.
ಯತ್ನಾಳ್ ಅವರನ್ನು ಉಚ್ಛಾಟಿಸಿದ ಹಿನ್ನೆಲೆಯಲ್ಲಿ ಉಂಟಾಗಿರುವ ಬೆಳವಣಿಗೆಗಳ ಬಗ್ಗೆ ಭಿನ್ನಮತಿಯ ನಾಯಕರು ಮಾಜಿ ಸಂಸದ ಜಿಎಂ ಸಿದ್ದೇಶ್ ಅವರ ನಿವಾಸದಲ್ಲಿ ಸಭೆ ನಡೆಸಿದರು.
ಈ ಸಭೆಯಲ್ಲಿ ಮಾಜಿ ಮಂತ್ರಿಗಳಾದ ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ ಬಿಪಿ ಹರೀಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಈ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ್ ಬಂಗಾರಪ್ಪ ನಾವು ಯಾವುದೇ ಕಾರಣಕ್ಕೂ ಹೈಕಮಾಂಡ್ ಆದೇಶವನ್ನು ಪ್ರಶ್ನಿಸುವುದಿಲ್ಲ. ಆದೇಶ ಮರು ಪರಿಶೀಲಿಸುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದರು.
ನಾವು ಯಾರೂ ಕೂಡ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಲ್ಲ ತಪ್ಪು ಮಾಹಿತಿಯ ಕಾರಣವೋ ಅಥವಾ ಇನ್ನೂ ಯಾವುದೋ ಕಾರಣಕ್ಕೆ ಯತ್ನಾಳ್ ಅವರ ವಿರುದ್ಧ ಕ್ರಮ ಜರುಗಿಸಲಾಗಿದೆ ಇದು ದುರದೃಷ್ಟಕರ. ಪಕ್ಷ ವಿರೋಧಿ ಚಟುವಟಿಕೆ ಕಾರಣಕ್ಕೆ ಏನಾದರೂ ಕ್ರಮ ಕೈಗೊಳ್ಳುವದಿದ್ದರೆ ಮೊದಲು ಶಾಸಕರಾದ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು ಆದರೆ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಯಾವುದೋ ಶಕ್ತಿಗಳಿಗೆ ಹೈಕಮಾಂಡ್ ಮಣಿದಿದೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಬೇಕು ಪಕ್ಷ ಮತ್ತಷ್ಟು ಬಲಯುತವಾಗಿ ಸಂಘಟಿತಗೊಳ್ಳಬೇಕು ಎಂದು ನಾವು ನಡೆಸುತ್ತಿರುವ ಹೋರಾಟ ಮುಂದುವರೆಯಲಿದೆ ಯಾವುದೇ ಕಾರಣಕ್ಕೂ ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಬದಲಾವಣೆ ಆಗಬೇಕು ಎಂದು ಆರಂಭಿಸಿರುವ ಹೋರಾಟದಲ್ಲಿ ಯಾವುದೇ ರಾಜಿ ಇಲ್ಲ ಆ ಕುರಿತು ನಮ್ಮ ಹೋರಾಟ ಮುಂದುವರೆಯಲಿದೆ ಸದ್ಯದಲ್ಲೇ ಪಕ್ಷಕ್ಕೆ ನೂತನ ರಾಷ್ಟ್ರೀಯ ಅಧ್ಯಕ್ಷರು ಬರಲಿದ್ದಾರೆ ಆರ್ ನಂತರ ನಾವೆಲ್ಲರೂ ನಿಯೋಗದಲ್ಲಿ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರಿಗೆ ವಸ್ತು ಸ್ಥಿತಿಯನ್ನು ವಿವರಿಸಿ ಯತ್ನಾಳ್ ಅವರ ಉಚ್ಚಾಟನೆಯ ಆದೇಶ ವಾಪಸ್ ಪಡೆಯುವಂತೆ ಮನವಿ ಮಾಡಲಿದ್ದೇವೆ ಎಂದು ತಿಳಿಸಿದರು.
Previous Articleಬ್ಯಾಂಕ್ ದರೋಡೆಗೆ ಬೇಕರಿ ನಡೆಸುತ್ತಿದ್ದ ಕಳ್ಳರು
Next Article ಹನಿ ಟ್ರ್ಯಾಪ್ ತನಿಖೆಗೆ ಹಬ್ಬದ ರಜೆ