ಬೆಳಗಾವಿ,ಡಿ.16:
ಪಶ್ಚಿಮಘಟ್ಟ ಪ್ರದೇಶದ ನಿವಾಸಿಗಳ ಆತಂಕ ದೂರ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಪಶ್ಚಿಮಘಟ್ಟ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಅರಣ್ಯ ಮಂತ್ರಿ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ವಿಧಾನ ಪರಿಷತ್ ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ಸಿನ ಐವಾನ್ ಡಿಸೋಜಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪಶ್ಚಿಮಘಟ್ಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ 6 ಅಧಿಸೂಚನೆ ಹೊರಡಿಸಿದೆ.ಕಳೆದ,2024ರಲ್ಲಿ 6ನೇ ಅಧಿಸೂಚನೆ ಆದ ಬಳಿಕ 10 ಜಿಲ್ಲೆಗಳ ಜನಪ್ರತಿನಿಧಿಗಳ ಸಭೆ ಕರೆದು ಚರ್ಚಿಸಲಾಯಿತು ಎಂದು ಹೇಳಿದರು.
ಈ ಸಭೆಯ ನಂತರ ಸಚಿವ ಸಂಪುಟದ ಉಪಸಮಿತಿ ಸಭೆಯಲ್ಲೂ ವರದಿಯ ಬಗ್ಗೆ ಸಮಗ್ರ ಪರಾಮರ್ಶೆ ನಡೆಸಿ ಈ ವರದಿಗೆ ರಾಜ್ಯದ ಒಪ್ಪಿಗೆ ಇಲ್ಲ ಎಂದು ನಿರ್ಣಯಿಸಿ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಕಸ್ತೂರಿ ರಂಗನ್ ತಮ್ಮ ವರದಿಯಲ್ಲಿ ರಾಜ್ಯದ ಪಶ್ಚಿಮಘಟ್ಟದ ಸುಮಾರು 20,668 ಚದರ ಕಿಲೋ ಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲು ಶಿಫಾರಸು ಮಾಡಲಾಗಿದೆ ಈ ಪೈಕಿ 16 ಸಾವಿರ ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಈಗಾಗಲೇ ರಾಜ್ಯದ ವನ್ಯಜೀವಿಧಾಮಗಳು, ರಾಷ್ಟ್ರೀಯ ಉದ್ಯಾನ, ಹುಲಿ ಸಂರಕ್ಷಿತ ಪ್ರದೇಶ, ರಕ್ಷಿತ ಅರಣ್ಯ ಪ್ರದೇಶಗಳಿವೆ. ಉಳಿದ 4 ಸಾವಿರ ಚದರ ಕಿಲೋ ಮೀಟರ್ ವ್ಯಾಪ್ತಿಯನ್ನು ಸೂಕ್ಷ್ಮ ಅರಣ್ಯ ಎಂದು ಘೋಷಿಸಬೇಕು ಎಂಬ ಶಿಫಾರಸು ಈ ವರದಿಯಲ್ಲಿದೆ. ಆದರೆ ನಾವು ಇದನ್ನು ತಿರಸ್ಕರಿಸಿದ್ದೇವೆ. ಹೀಗಾಗಿ ಕಸ್ತೂರಿ ರಂಗನ್ ವರದಿಯ ಶಿಫಾರಸುಗಳ ಬಗ್ಗೆ ಈ ಭಾಗದ ಜನರಿಗೆ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.
Previous Articleಕೋರ್ಟ್ ನಲ್ಲಿ ಕಾಂಗ್ರೆಸ್ ಗೆಲುವು
Next Article 482 ಎಕರೆ ಅರಣ್ಯಭೂಮಿ ಕಬಳಿಸಿದವ ಏನಾದ ಗೊತ್ತಾ?

