ಬೆಂಗಳೂರು,ಜ.23:
ಜೆಡಿಎಸ್ ನಾಯಕ ಹಾಗೂ ಮಾಜಿ ಮಂತ್ರಿ ಎಚ್.ಡಿ. ರೇವಣ್ಣ ಅವರ ಪುತ್ರ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿ ತನಿಖೆ ಪೂರ್ಣಗೊಳಿಸಿದ ಪೋಲಿಸ್ ತಂಡಕ್ಕೆ ಭಾರಿ ಬಹುಮಾನ ಘೋಷಿಸಲಾಗಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದ ಲೈಂಗಿಕ ಹಗರಣಗಳ ಆರೋಪಗಳ ಬಗ್ಗೆ ಸಮಗ್ರವಾದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಸೂಕ್ತ ಸಾಕ್ಷಾಧಾರಗಳನ್ನು ಹಾಜರುಪಡಿಸಿ ಎಲ್ಲಾ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾದ ವಿಶೇಷ ತನಿಖಾ ತಂಡಕ್ಕೆ ರಾಜ್ಯಗೃಹ ಇಲಾಖೆ ಪ್ರಶಂಸೆ ವ್ಯಕ್ತಪಡಿಸಿ 30 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.
ಪ್ರಜ್ವಲ್ ರೇವಣ್ಣ ವಿರುದ್ಧದ ಪ್ರಕರಣಗಳ ತನಿಖೆಗೆ ರಚಿಸಲಾಗಿದ್ದ ತನಿಖಾ ತಂಡದ 30 ಅಧಿಕಾರಿ, ಸಿಬ್ಬಂದಿಗೆ ನಗದು ಬಹುಮಾನ ಘೋಷಣೆ ಮಾಡಲಾಗಿದೆ. ಎಸ್‌ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್, ಡಿಐಜಿ ಸೀಮಾ ಲಾಟ್ಕರ್, ಎಸ್‌ಪಿ ಸುಮನ್ ಡಿ ಪನ್ನೇಕರ್, ಎಸ್‌ಪಿ, ಸಿಎ ಸೈಮನ್, ಎಸಿಪಿ ಸತ್ಯನಾರಾಯಣ ಸಿಂಗ್, ಇನ್ಸ್ಪೆಕ್ಟರ್‌ಗಳಾದ ರಾವ್ ಗಣೇಶ್ ಜನಾರ್ದನ್, ಶೋಭಾ ಜಿ, ಸುಮಾರಾಣಿ, ಹೇಮಂತ್ ಕುಮಾರ್ ಸೇರಿದಂತೆ 30 ಮಂದಿ ಅಧಿಕಾರಿಗಳು, ಸಿಬ್ಬಂದಿಗೆ 25 ಲಕ್ಷ ರೂ. ನಗದು ಬಹುಮಾನ ಘೋಷಿಸಲಾಗಿದೆ.

