ಬೆಂಗಳೂರು,
ಸಕ್ಕರೆ ಕಾರ್ಖಾನೆಗಳಿಗೆ ರಾಜ್ಯ ಸರ್ಕಾರ ಬಿಸಿ ಮುಟ್ಟಿಸಲು ಮುಂದಾಗಿದೆ ಕಬ್ಬು ಪೂರೈಕೆ ಮಾಡಿದ ರೈತರಿಗೆ ನಿಯಮಾನುಸಾರ ಬಿಲ್ ಪಾವತಿ ಮಾಡದ 16 ಸಕ್ಕರೆ ಕಾರ್ಖಾನೆಗಳಿಗೆ ರಿಕವರಿ ಸರ್ಟಿಫಿಕೇಟ್(ವಸೂಲಾತಿ ದೃಢೀಕರಣ ಪತ್ರ) ಜಾರಿ ಮಾಡಲಾಗಿದೆ.
ರೈತರಿಗೆ ಕೊಡಬೇಕಾದ ಕಬ್ಬಿನ ಬಿಲ್ ಬಾಕಿಯನ್ನು ಕಂದಾಯ ಬಾಕಿ ಎಂದು ಪರಿಗಣಿಸಿ ಶೇಕಡ 15ರಷ್ಟು ಬಡ್ಡಿಯೊಂದಿಗೆ ರೈತರಿಗೆ ಕೊಡಿಸಬೇಕು ಎಂದು ಕಬ್ಬು ಅಭಿವೃದ್ಧಿ ಆಯುಕ್ತರು ಹಾಗೂ ಸಕ್ಕರೆ ನಿರ್ದೇಶಕ ಗೋವಿಂದರೆಡ್ಡಿ ಅವರು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ರಾಜ್ಯದಲ್ಲಿ ಪ್ರಸಕ್ತ ಹಂಗಾಮಿನಲ್ಲಿ ಒಟ್ಟು 81 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಿದ್ದು, ನಾಲ್ಕು ಸಹಕಾರಿ ಸೇರಿದಂತೆ ಒಟ್ಟು 16 ಸಕ್ಕರೆ ಕಾರ್ಖಾನೆಗಳು ನಿಯಮಾನುಸಾರ ಕಬ್ಬಿನ ಬಿಲ್ ಪಾವತಿ ಮಾಡದ ಕಾರಣ ರಿಕವರಿ ಸರ್ಟಿಫಿಕೇಟ್ ಜಾರಿ ಮಾಡಲಾಗಿದೆ.
ಕೆಲವು ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿದ್ದು, ಅಂತಹ ಕಾರ್ಖಾನೆಗಳಗೆ ಬಾಕಿಯನ್ನು ತಕ್ಷಣ ಪಾವತಿ ಮಾಡಬೇಕು ಎಂದು ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್ ನೀಡಿದ ನಂತರವೂ ಕೆಲವು ಕಾರ್ಖಾನೆಗಳು ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ರಿಕವರಿ ಸರ್ಟಿಫಿಕೇಟ್ ಜಾರಿ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಕಳೆದ ಹಂಗಾಮಿಗೆ ಹೋಲಿಕೆ ಮಾಡಿದರೆ ಕಾರ್ಖಾನೆಗಳು ಘೋಷಿಸಿದ ದರದಂತೆ ಪ್ರತಿ ಟನ್ ಕಬ್ಬಿಗೆ 250ರಿಂದ 300 ರೂ. ಹೆಚ್ಚಳವಾಗಿದೆ. ಕಬ್ಬಿನ ಬಿಲ್ ಪಾವತಿಯನ್ನು ಹೋಲಿಕೆ ಮಾಡಿದರೆ ಕಳೆದ ಹಂಗಾಮಿಗಿಂತ 4,709.89 ಕೋಟಿ ರೂ. ಹೆಚ್ಚಳವಾಗಲಿದೆ.
ಕಬ್ಬಿನ ಬಿಲ್ ಪಾವತಿಯಲ್ಲಿ ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ಮೊದಲ ಸ್ಥಾನದಲ್ಲಿದೆ. 2022-23ರ ಹಂಗಾಮಿನಲ್ಲಿ ಶೇಕಡಾ 102ರಷ್ಟು, 2023-24ರ ಹಂಗಾಮಿನಲ್ಲಿ ಶೇಕಡಾ 104ರಷ್ಟು ಹಾಗೂ 2024-25ನೇ ಹಂಗಾಮಿನಲ್ಲಿ ಪ್ರತಿಶತ 107.39ರಷ್ಟು ಹಣವನ್ನು ಪಾವತಿ ಮಾಡಲಾಗಿದ್ದು, ಇದು ಎಫ್.ಆರ್.ಪಿ ದರಕ್ಕಿಂತ ಹೆಚ್ಚಿದೆ.
ಕಳೆದ ಹಂಗಾಮಿಗೆ ಹೋಲಿಕೆ ಮಾಡಿದರೆ ಈ ಹಂಗಾಮಿನಲ್ಲಿ, ಕಬ್ಬು ನುರಿಸುವಿಕೆ ಮತ್ತು ಸಕ್ಕರೆ ಉತ್ಪಾದನೆ ಪ್ರಮಾಣದಲ್ಲಿ ಶೇಕಡಾ 9 ರಷ್ಟು ಏರಿಕೆಯಾಗಿದೆ.ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಸರ್ಕಾರ ಕೈಗೊಂಡ ಕ್ರಮಗಳ ಪರಿಣಾಮ ಸಕ್ಕರೆ ಇಳುವರಿ ಪ್ರಮಾಣದಲ್ಲಿ ಏರಿಕೆಯಾಗಿದೆ.
2025-26ನೇ ಹಂಗಾಮಿನ ಅಂತ್ಯಕ್ಕೆ ಸುಮಾರು 574 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ ಸುಮಾರು 23,250 ಕೋಟಿ ರೂ.ಗಳಷ್ಟು ಹಣವನ್ನು ಕಬ್ಬು ಪೂರೈಕೆ ಮಾಡಿದ ರೈತರಿಗೆ ಪಾವತಿಸುವ ಅಂದಾಜು ಇದೆ ಎಂದು ಅವರು ವಿವರಿಸಿದ್ದಾರೆ.
ನೆರವು ಬಿಡುಗಡೆ:
ರಾಜ್ಯ ಸರ್ಕಾರ ಘೋಷಣೆ ಮಾಡಿದಂತೆ ಎಫ್ಆರ್ ಪಿ ಮೇಲೆ ಪ್ರತಿ ಟನ್ ಕಬ್ಬಿಗೆ 50 ರೂ.ಗಳ ಆರ್ಥಿಕ ನೆರವನ್ನು ಕಬ್ಬು ಪೂರೈಕೆ ಮಾಡಿದ ರೈತರಿಗೆ ನೀಡಲು ರಾಜ್ಯ ಸರ್ಕಾರ 300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.
ಕಬ್ಬು ಬೆಳೆಗಾರರ ಅಭಿಪ್ರಾಯದಂತೆ ಈ ಹಣವನ್ನು ಸಕ್ಕರೆ ಕಾರ್ಖಾನೆಗಳಿಗೆ ಬಿಡುಗಡೆ ಮಾಡಲಾಗಿದೆ. ಸಕ್ಕರೆ ಕಾರ್ಖಾನೆಗಳ ಪಾಲಿನ 50 ರೂ. ಆರ್ಥಿಕ ನೆರವು ಸೇರಿ ಒಟ್ಟು ನೂರು ರೂ.ಗಳನ್ನು ಕಬ್ಬು ಬೆಳೆಗಾರರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು ಎಂದು ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಲಾಗಿದೆ.
Previous Articleವಾಹನ ಸವಾರರೇ ಎಚ್ಚರ!
Next Article ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬಿಗ್ ಅಪ್ಡೇಟ್!

