ಬೆಂಗಳೂರು,- ರಾಜ್ಯದಲ್ಲಿ ಉತ್ತರ ಪ್ರದೇಶದ ಮಾದರಿಯಲ್ಲಿ ಬುಲ್ಡೋಸರ್ ಕಾನೂನನ್ನು ಜಾರಿಗೆ ತರಲು ಅವಕಾಶ ನೀಡಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಉತ್ತರ ಪ್ರದೇಶದಂತೆ ರಾಜ್ಯದಲ್ಲೂ ಬುಲ್ಡೋಸರ್ ಮಾದರಿ ಕಾನೂನು ಜಾರಿ ಮಾಡಿ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲು ಮುಂದಾದರೆ ಬುಲ್ಡೋಸರ್ ಕೆಳಗೆ ಮಲಗುತ್ತವೆ. ಬುಲ್ಡೋಸರ್ ನಮ್ಮ ಮೇಲೆ ಹತ್ತಿಸಲಿ ಎಂದರು.
ಅಲ್ಪಸಂಖ್ಯಾತರನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಹೆದರಿಸಬೇಕು ಎಂದು ಸುಮ್ಮನೆ ಕಿರುಕುಳ ಕೊಡುತ್ತಿದ್ದಾರೆ. ಬುಲ್ಡೋಸರ್ ಕಾನೂನು ರಾಜ್ಯದಲ್ಲಿ ನಡೆಯಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಚಿಕ್ಕಮಗಳೂರಿನಲ್ಲಿ ಅಕ್ರಮ ಕಟ್ಟಡಗಳ ಮೇಲೆ ಉತ್ತರ ಪ್ರದೇಶ ಮಾದರಿಯಲ್ಲಿ ಬುಲ್ಡೋಸರ್ ಪ್ರಯೋಗ ನಡೆಸಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದರು.
ರಾಷ್ಟ್ರ ಮಟ್ಟದಲ್ಲಿ ನಮ್ಮ ನಾಯಕರುಗಳು ಏನೂ ತಪ್ಪು ಮಾಡಿಲ್ಲ. ಅವರ ವಿರುದ್ಧ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ. ಜೈಲಿಗೆ ಹಾಕಲಿ ನಾವು ಹೆದರಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ ಕಾಂಗ್ರೆಸ್ ಎಂದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ನೆಹರೂ ಕಾಲದಿಂದಲೂ ಮುಂದುವರೆಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರೆಲ್ಲಾ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ದುಡ್ಡು ಕೊಟ್ಟಿದ್ದಾರೆ. ಅದನ್ನು ಕಾಂಗ್ರೆಸ್ ಪಕ್ಷ ಮುಂದುವರೆಸಿದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ನಡೆಸುವುದಕ್ಕೆ ಒಂದು ಟ್ರಸ್ಟ್ ಮಡಾಲಾಗಿತ್ತು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆ ಟ್ರಸ್ಟ್ ವಾರಸುದಾರಿಕೆಯನ್ನು ನಮ್ಮ ನಾಯಕರು ಹೊಂದಿದ್ದಾರೆ. ಟ್ರಸ್ಟ್ ಅಧ್ಯಕ್ಷರಾದ ತಕ್ಷಣ ಟ್ರಸ್ಟ್ ಆಸ್ತಿಯನ್ನು ನಮ್ಮದೆಂದು ಘೋಷಿಸಲು ಸಾಧ್ಯವಿಲ್ಲ. ಸೋನಿಯಾಗಾಂಧಿ ಆಗಲಿ, ರಾಹುಲ್‌ಗಾಂಧಿ ಅವರಾಗಲಿ ಚುನಾವಣಾ ಪ್ರಮಾಣ ಪತ್ರ ಸಲ್ಲಿಕೆ ಸಂದರ್ಭದಲ್ಲೂ ಈ ಬಗ್ಗೆ ಹೇಳಿಲ್ಲ. ಕೇಂದ್ರ ಸರ್ಕಾರ ಮಾಡುತ್ತಿರುವುದು ತಪ್ಪು ಎಂದರು.
ಪ್ರಜಾಪ್ರಭುತ್ವದಲ್ಲಿ ಹೋರಾಟ ನಡೆಸುವುದು ನಮ್ಮ ಹಕ್ಕು. ಅದನ್ನು ದಮನ ಮಾಡಲಾಗುತ್ತಿದೆ. ಇದು ತುರ್ತು ಪರಿಸ್ಥಿತಿಗಿಂತ ದೊಡ್ಡದು. ಇದಕ್ಕೆ ಬೇರೆ ಒಂದು ಹೆಸರು ನಾಮಕರಣ ಮಾಡಬೇಕು ಎಂದು ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.