ಬೆಂಗಳೂರು,ಜೂ.5- ದೇವಾಲಯದ ಪ್ರವೇಶ ದ್ವಾರಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ದಾರುಣ ಘಟನೆ ನೆಲಮಂಗಲ ಸಮೀಪದ ಅಡಕಮಾರನಹಳ್ಳಿ ಆಂಜನೇಯ ಸ್ವಾಮಿ ದೇಗುಲದ ಬಳಿ ನಡೆದಿದೆ.
ಆಂಧ್ರಪ್ರದೇಶ ಮೂಲದ ಕೂಲಿ ಕಾರ್ಮಿಕ ನರಸಪ್ಪ ಮೃತಪಟ್ಟವರು. ದೇವಾಲಯದ ಪ್ರವೇಶ ದ್ವಾರಕ್ಕೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕಂಬ ಕುಸಿದು, ಬೈಕ್ ಸವಾರನ ಮೇಲೆ ಬಿದ್ದಿದೆ. ಕಂಬದ ಅವಶೇಷಗಳಡಿ ಸಿಲುಕಿದ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೂಲಿ ಕಾರ್ಮಿಕ ನರಸಪ್ಪ ಬೈಕ್‌ನಲ್ಲಿ ಹೋಗುತ್ತಿದ್ದ ಸಂದರ್ಭ ಘಟನೆ ನಡೆದಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ನರಸಪ್ಪ ಕೇವಲ 3 ದಿನಗಳ ಹಿಂದೆ ಕೂಲಿ ಅರಸಿ ಕುಟುಂಬ ಸಮೇತರಾಗಿ ಆಂಧ್ರಪ್ರದೇಶದಿಂದ ಅಡಕಮಾರನಹಳ್ಳಿಗೆ ಬಂದಿದ್ದರು.
ಆದರೆ ಲಾರಿ ಚಾಲಕನ ನಿರ್ಲಕ್ಷ್ಯದಿಂದಾಗಿ ಪ್ರವೇಶ ದ್ವಾರದ ಕಂಬ ಬೈಕ್ ಮೇಲೆ ಬಿದ್ದು, ನರಸಪ್ಪ ಬಲಿಯಾಗಿದ್ದು ನೆಲಮಂಗಲ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.