ಬೆಂಗಳೂರು,ಫೆ.18-
ಪ್ರೀತಿಸಲು ನಿರಾಕರಿಸಿದ ಅಪ್ರಾಪ್ತ 17 ವರ್ಷದ ಕಾಲೇಜು ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ (Acid attack) ನಡೆಸಿದ ಪಾಗಲ್ ಪ್ರೇಮಿ ಮೆಕಾನಿಕ್ ನನ್ನು ಕನಕಪುರ ಪೊಲೀಸರು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕನಕಪುರದ ಕಾರ್ ಮೆಕಾನಿಕ್ ಸುಮಂತ್(22) ಬಂಧಿತ ಆರೋಪಿಯಾಗಿದ್ದಾನೆ. ಕಳೆದ ರಾತ್ರಿ 9ರ ವೇಳೆ ವಿದ್ಯಾರ್ಥಿನಿ ಮೇಲೆ ಸುಮಂತ್ ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದು, ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ. ವಿದ್ಯಾರ್ಥಿನಿಯು ಪ್ರೀತಿ ನಿರಾಕರಿಸಿದ್ದರಿಂದ ಆಕ್ರೋಶಗೊಂಡು ಕೃತ್ಯ ನಡೆಸಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ ಮೆಕಾನಿಕ್ ಕೆಲಸ ಮಾಡುತ್ತಿದ್ದ ಸುಮಂತ್ ತನ್ನ ಗ್ಯಾರೇಜ್ ಮುಂಭಾಗದಿಂದ ನಡೆದುಕೊಂಡು ಕಾಲೇಜ್ ಗೆ ಹೋಗಿ ಬರುತ್ತಿದ್ದ ವಿದ್ಯಾರ್ಥಿನಿಯನ್ನು ಅಡ್ಡ ಹಾಕಿ ಪ್ರೀತಿಸುವಂತೆ ಪೀಡಿಸುತ್ತಿದ್ದು, ಆಕೆಯು ನಿರಾಕರಿಸುತ್ತಿದ್ದರಿಂದ ಆಕ್ರೋಶಗೊಂಡು ಕಳೆದ ದಿನ ರಾತ್ರಿ 9 ಗಂಟೆ ವೇಳೆ ಕನಕಪುರ ತಾಲೂಕಿನ ಬೈಪಾಸ್ ರಸ್ತೆ ನಾರಾಯಣಪ್ಪ ಕೆರೆ ಬಳಿ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಪ್ರೀತಿಸುವಂತೆ ಪೀಡಿಸಿದ್ದಾನೆ. ಮತ್ತೆ ಸಹ ಅವನ ಪ್ರೀತಿಯನ್ನು ನಿರಾಕರಿಸಿದಾಗ ರೊಚ್ಚಿಗೆದ್ದ ಸುಮಂತ್ ತಾನೂ ತಂದಿದ್ದ ಆ್ಯಸಿಡ್ ಅನ್ನು ಅವಳ ಮುಖದ ಮೇಲೆ ಎರಚಿ ಪರಾರಿಯಾಗಿದ್ದಾನೆ.
ಆ್ಯಸಿಡ್ ದಾಳಿಯಿಂದ ನರಳಾಡುತ್ತಿದ್ದ ವಿದ್ಯಾರ್ಥಿನಿಯನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಆ್ಯಸಿಡ್ ದಾಳಿಯಿಂದ ಬಾಲಕಿಯ ಎಡ ಕಣ್ಣಿಗೆ ತೀವ್ರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಕಣ್ಣು ಮತ್ತು ಆಕೆಯ ಸ್ಥಿತಿಯ ಬಗ್ಗೆ ವೈದ್ಯರು ಇನ್ನೂ ಯಾವುದೇ ವರದಿ ನೀಡಿಲ್ಲ.
ಸ್ಥಳಕ್ಕೆ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ಬಾಲಕಿಯ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ (POCSO Act) ಅಡಿ ಪ್ರಕರಣ ದಾಖಲಾಗಿದ್ದು, ಘಟನೆ ನಡೆದು ಕೆಲ ಹೊತ್ತಿನಲ್ಲೆ ಆರೋಪಿಯನ್ನ ಬಂಧಿಸಿದ್ದಾರೆ.