ಬೆಂಗಳೂರು,ಅ.31:
ವಿವಿಧ ನೆಪಗಳನ್ನು ಮುಂದೊಡ್ಡಿ ಕಾಂಗ್ರೆಸ್ ನಾಯಕರನ್ನು ಮಣಿಸಲು ಕೇಂದ್ರ ಸರ್ಕಾರ ಸಂಚು ಮಾಡಿದೆ ಹೀಗಾಗಿ ಯಾರಿಗಾದರೂ ನೋವಾದರೆ ಎಲ್ಲರೂ ಒಟ್ಟಾಗಬೇಕು. ಖುಷಿ ಪಡುವುದನ್ನು ಮೊದಲು ಬಿಡಿ. ಒಗ್ಗಟ್ಟಿದ್ದರೆ ಮಾತ್ರ ಖುಷಿ’ ಎಂದು ರಾಜ್ಯ ಕಾಂಗ್ರೇಸ್ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿವಿಮಾತು ಹೇಳಿದ್ದಾರೆ
ಇಂದಿರಾಗಾಂಧಿ ಅವರ ಪುಣ್ಯ ಸ್ಮರಣೆ ಮತ್ತು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಏನಾದರೂ ಆದರೆ ಇನ್ನೊಬ್ಬರು ಖುಷಿ ಪಡುವುದು, ಶಿವಕುಮಾರ್ ಅವರಿಗೆ ಏನಾದರೂ ಆದರೆ ಮತ್ತೊಬ್ಬರು ಖುಷಿ ಪಡುವುದನ್ನು ಬಿಡಬೇಕು. ಏನೇ ಆದರೂ ಒಗ್ಗಟ್ಟಾಗಿರಬೇಕು’ ಎಂದರು.
ಒಬ್ಬರನ್ನು ಕಂಡರೆ ಮತ್ತೊಬ್ಬರು ಉರಿದುಕೊಳ್ಳಬೇಡಿ. ನಿಮ್ಮನ್ನು ಅಟ್ಟಕ್ಕೇರಿಸಿ ಪಕ್ಷ ಹಾಳು ಮಾಡುವವರಿದ್ದಾರೆ. ಅವರು ಹೇಳಿದಂತೆ ಕೇಳಿದರೆ ಪಕ್ಷವೇ ಒಡೆದು ಹೋಗುತ್ತದೆ. ಮೊದಲು ನೀವು ಎಚ್ಚೆತ್ತುಕೊಳ್ಳಿ. ಒಗ್ಗಟ್ಟಿನಿಂದ ಎಲ್ಲರೂ ಹೋರಾಟ ಮಾಡಿದರೆ ಪಕ್ಷ ಬಲಗೊಳ್ಳುತ್ತದೆ. ಎಲ್ಲರೂ ಒಂದಾಗಿದ್ದರೆ ಯಾರೂ ನಿಮ್ಮ ಮೇಲೆ ಕೈ ಎತ್ತುವುದಿಲ್ಲ’ ಎಂದರು.
ರಾಜ್ಯ ರಾಜಕಾರಣದ ವಿಚಾರದಲ್ಲಿ ನಾನು ಕೈ ಹಾಕುವುದಿಲ್ಲ. ಏನೇ ಕೇಳಿದರೂ ರಾಜ್ಯದ ನಾಯಕರನ್ನು ಕೇಳಿ ಎಂದು ಹೇಳುತ್ತೇನೆ. ನಾನೇನಾದರೂ ಮಾತನಾಡಿದರೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗುತ್ತದೆ. ಅದಕ್ಕೆ ನಾನು ಏನೂ ಮಾತನಾಡುವುದಿಲ್ಲ. ಇಲ್ಲಿ ನೀವೇ ಬಗೆಹರಿಸಿಕೊಳ್ಳಬೇಕು’ ಎಂದು ಖರ್ಗೆ ಸಲಹೆ ನೀಡಿದರು.