ಬೆಂಗಳೂರು,ಜ.20-ಭಯೋತ್ಪಾದನಾ ಚಟುವಟಿಕೆಗಳ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಂಡು ತಿಲಕ್ ನಗರದಲ್ಲಿ ಬಂಧಿಸಿದ್ದ ಇಬ್ಬರು ಶಂಕಿತ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಎನ್ ಐಎ) ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.
ಶಂಕಿತ ಉಗ್ರರಾದ ಅಖ್ತರ್ ಹುಸೇನ್, ಅಬ್ದುಲ್ ಅಲಿಮ್ ಮಂಡಲ್ ವಿರುದ್ಧ ಎನ್‍ಐಎ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ತಿಲಕ್ ನಗರದಲ್ಲಿ ಡೆಲಿವರಿ ಬಾಯ್ ಆಗಿದ್ದುಕೊಂಡು ಭಯೋತ್ಪಾದನೆ ಸಂಘಟನೆ ಜತೆ ಸಂರ್ಪಕದಲ್ಲಿದ್ದ ಇವರು ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರ ಚಟುವಟಿಕೆಗೆ ಸ್ಥಳೀಯ ಯುವಕರನ್ನು ಪ್ರೇರೇಪಣೆ ಮಾಡುತ್ತಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.
ಆರೋಪಿಗಳು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಅಲ್-ಖೈದಾದೊಂದಿಗೆ ಸಂಬಂಧ ಹೊಂದಿದ್ದರು. ಭಾರತದಲ್ಲಿ ಕೋಮುಗಲಭೆಯನ್ನು ಪ್ರಚೋದಿಸಲು ಆರೋಪಿಗಳು ಯುವಕರನ್ನು ಮತ್ತಷ್ಟು ಪ್ರಚೋದಿಸಿದ್ದರು. ಆರೋಪಿಗಳು ಎಂಡ್ ಟು ಎಂಡ್ ಎನ್‌ಕ್ರಿಪ್ಟೆಡ್ ಕಮ್ಯುನಿಕೇಷನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ವಿದೇಶದಲ್ಲಿರುವ ಆನ್‌ಲೈನ್ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಎನ್‌ಐಎ ಹೇಳಿದೆ.
ದಾಳಿ ವೇಳೆ ಜಿಹಾದಿ ದಾಖಲೆ ಪತ್ರಗಳು, ಎಲೆಕ್ಟ್ರಾನಿಕ್ ಡಿವೈಸ್‍ಗಳು ಪತ್ತೆಯಾಗಿದ್ದು ಅಲ್-ಖೈದಾ ಸಂಘಟನೆಗೆ ಸೇರಲು ಉಗ್ರರಿಗೆ ಟ್ರೈನಿಂಗ್ ನೀಡಿ ಭಾರತದಲ್ಲಿ ಶಾಂತಿ ಕದಡಲು ಇವರು ಸಂಚು ರೂಪಿಸಿದ್ದರು ಎಂದು ಉಲ್ಲೇಖಿಸಿದೆ.
ಡೆಲಿವರಿ ಬಾಯ್‍ಗಳಂತೆ ತಿಲಕ್‍ನಗರದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರ ಬಗ್ಗೆ ಗುಪ್ತಚರ ಇಲಾಖೆ ನೀಡಿದ್ದ ಮಾಹಿತಿ ಮೇರೆಗೆ ಸಿಸಿಬಿ ದಾಳಿ ನಡೆಸಿತ್ತು. ಕಳೆದ ವರ್ಷ ಜುಲೈ 24 ರಂದು ಬೆಂಗಳೂರಿನ ತಿಲಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ನಂತರ ನಂತರ ಆಗಸ್ಟ್ 30 ರಂದು ಈ ಪ್ರಕರಣ ಎನ್‌ಐಎಗೆ ವರ್ಗಾವಣೆಯಾಗಿತ್ತು.