ಬೆಂಗಳೂರು,ಜು. 4- ಆಪರೇಷನ್ ದಕ್ಷಿಣ್ ಅಲ್ಲ, ಬಿಜೆಪಿ ಅಸ್ತಿತ್ವಕ್ಕೇ ಆಪರೇಷನ್ ಆಗುವ ಕಾಲ ಹತ್ತಿರದಲ್ಲೇ ಇದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂದು ಹೇಳಿರುವ ಸಿ.ಟಿ. ರವಿ ಅವರಿಗೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ಆಂತರಿಕ ಪ್ರಜಾಪ್ರಭುತ್ವ ಎಂದರೆ, ನರೇಂದ್ರ ಮೋದಿ ಮುಂದೆ ‘ಸತ್ತಸೊಂಟ’ದವರಂತೆ ನಡುಬಗ್ಗಿಸಿ ತಲೆ ಅಲ್ಲಾಡಿಸುವುದಾ? ಜೀ, ಜೀ, ಎನ್ನುತ್ತಾ ಜೀ ಹುಜೂರ್ ಎನ್ನುವುದಾ? 25 ಸಂಸದರ ಯೋಗ್ಯತೆ ಏನು? ಅವರಿಗೆಷ್ಟು ಸ್ವಾತಂತ್ರ್ಯ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು ಆಪರೇಷನ್_ದಕ್ಷಿಣ್ – ಇದು ಬಿಜೆಪಿ ಹೊಸ ಸ್ಲೋಗನ್.!! ಹೈದರಾಬಾದ್ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದು, ಜನರ ಮನಸ್ಸುಗಳನ್ನು ಒಡೆದು ರಾವಣ ರಾಜಕೀಯದ ವಿನಾಶಕಾರಿ ದಾರಿಗೆ ಹಿಡನ್ ಅಜೆಂಡಾ ಸಿದ್ಧ ಮಾಡಲಾಯಿತಾ? ಹೇಳಿ ಮಾನ್ಯ ರವಿಯವರೇ, ಎಂದಿದ್ದಾರೆ.
ನೆಮ್ಮದಿಯ ಸಮಾಜಕ್ಕೆ ಕೋಮುವಿಷ ಪ್ರಾಶಣ ಮಾಡುವ ಇಂಜೆಕ್ಷನ್. ಧರ್ಮ, ದೇವರು, ಜಾತಿ, ಭಾಷೆ, ಆಚಾರ, ಆಹಾರ, Businessಗಳನ್ನು ಎಳೆತಂದು, ಅಸಹಿಷ್ಣುತೆ ಸೃಷ್ಟಿಸಿ ಭಾರತವನ್ನು ಧರ್ಮದ ಆಧಾರದಲ್ಲಿ ಒಡೆದುಹಾಕುವುದಾ? ಕರ್ನಾಟಕದ ನಂತರ ನಿಮ್ಮ ಮುಂದಿನ ಗುರಿ ದಕ್ಷಿಣ ಭಾರತ. ಹೌದಲ್ಲವೇ ಸಿ.ಟಿ. ರವಿಯವರೇ? ಎಂದು ಪ್ರಶ್ನಿಸಿದ್ದಾರೆ.
Previous Articleಧಾನ್ಯಗಳಲ್ಲೇ ಮೂಡಿ ಬಂದಳು ಕಟೀಲು ಶ್ರೀದುರ್ಗೆ
Next Article ಪೌರ ಕಾರ್ಮಿಕರ ಧರಣಿಯಲ್ಲಿ ಜಮೀರ್..