ಬೆಂಗಳೂರು, ಅ.9- ಪರಪ್ಪನ ಅಗ್ರಹಾರ (Parappana Agrahara) ಕೇಂದ್ರ ಕಾರಾಗೃಹ ಹಾಗೂ ಬೆಳಗಾವಿ ಹಿಂಡಲಗಾ ಕಾರಾಗೃಹದಿಂದ ಬಂದೀಖಾನೆಯ ಉತ್ತರ ವಲಯ ಡಿಐಜಿಪಿ ಟಿ.ಪಿ.ಶೇಷ ಅವರ ವಸತಿಗೃಹವನ್ನು ಸ್ಪೋಟಿಸಿ,ಅವರ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ.
ಉತ್ತರ ವಲಯ ಡಿಐಜಿಪಿ ಟಿ.ಪಿ.ಶೇಷ ಅವರಿಗೆ ಬೆದರಿಕೆ ಕರೆ ಬಂದಿದ್ದು ಭದ್ರತೆಯನ್ನು ಹೆಚ್ಚಿಸಲಾಗಿದೆ.
ಅಪರಿಚಿತ ವ್ಯಕ್ತಿ ಟಿ.ಪಿ.ಶೇಷ ಅವರ ಸರ್ಕಾರಿ ನಂಬರ್‌ಗೆ ಕರೆ ಮಾಡಿ, “ನನಗೆ ಹಿಂಡಲಗಾ ಜೈಲಿನ ಹಿಂಡಲಗಾ ಜೈಲಿನ ಹೆಡ್ ವಾರ್ಡನ್ಗಳಾದ ಜಗದೀಶ್ ಗಸ್ತಿ, ಎಸ್.ಎಂ.ಗೋಟೆ ಪರಿಚಯವಿದ್ದಾರೆ. ಅಲ್ಲದೆ ಭೂಗತ ಪಾತಕಿ ಬನ್ನಂಜೆ ರಾಜಾ ಕೂಡ ನನಗೆ ಗೊತ್ತು.
ನಾನು ಜೈಲಿನಲ್ಲಿದ್ದಾಗ ಆತನಿಗೆ ನಾನು ಸಹಾಯ ಮಾಡಿದ್ದೇನೆ. ಹಿಂಡಲಗಾ ಜೈಲಿನಲ್ಲಿ ಗಲಭೆ ಸೃಷ್ಟಿಸಿ ನಿಮ್ಮ ಮೇಲೆ ಹಲ್ಲೆ ಮಾಡಲಾಗುವುದು. ತಾವು ವಾಸಿಸುವ ವಸತಿಗೃಹವನ್ನೂ ಸ್ಫೋಟಿಸುವುದಾಗಿ” ಬೆದರಿಕೆ ಕರೆ ಮಾಡಿದ್ದೇನೆ.
ಬೆದರಿಕೆ ಕರೆ ಹಿನ್ನೆಲೆಯಲ್ಲಿ ಅನಾಮಧೇಯ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಐಜಿಪಿ ಟಿ.ಪಿ.ಶೇಷ ಅವರು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತೀಚೆಗೆ ಹಿಂಡಲಗಾ ಜೈಲಿನಲ್ಲಿ ಗಾಂಜಾ, ಅಫೀಮು ಮತ್ತು ಮೊಬೈಲ್ ಪತ್ತೆಯಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿ ಮೊಬೈಲ್, ಗಾಂಜಾ ಹಾಗೂ ಇತರೆ ವಸ್ತುಗಳನ್ನು ಪತ್ತೆ ಹಚ್ಚಿದ್ದರು.
ಗಡ್ಕರಿಗೆ ಜೀವ ಬೆದರಿಕೆ:
ಕಳೆಸ ಜನವರಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಕರೆ ಮಾಡಲಾಗಿತ್ತು. ಸಚಿವ ನಿತಿನ್ ಗಡ್ಕರಿ ಅವರ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಕಚೇರಿಗೆ ಬೆದರಿಕೆ ಕರೆ ಮಾಡಲಾಗಿತ್ತು. 10 ಕೋಟಿ ನೀಡದಿದ್ದರೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದರು. ಪ್ರಕರಣವನ್ನು ದಾಖಲಿಸಿಕೊಂಡು ಮಹಾರಾಷ್ಟ್ರ ಪೊಲೀಸರು ಕರಣದ ತನಿಖೆ ನಡೆಸಿದ್ದರು.
ತನಿಖೆ ವೇಳೆ ಮಂಗಳೂರಿನ ಡಬಲ್ ಮರ್ಡರ್ ಆರೋಪಿ ಹಾಗೂ ವಿವಿಧ ಪ್ರಕರಣಗಳ ಪ್ರಮುಖ ಆರೋಪಿ ಜಯೇಶ್ ಪೂಜಾರಿ ಅಲಿಯಾಸ್ ಜಯೇಶ್ ಕಾಂತ್ ಜನವರಿ 14 ಮತ್ತು ಮಾರ್ಚ್ 21 ರಂದು ಹಿಂಡಲಗಾ ಜೈಲಿನಿಂದ ಸೆಲ್ ಫೋನ್ ಬಳಸಿ ಗಡ್ಕರಿ ಅವರಿಗೆ ಬೆದರಿಕೆ ಕರೆಗಳನ್ನು ಮಾಡಿದ್ದನು ಎಂದು ಪತ್ತೆಯಾಗಿತ್ತು. ಅಲ್ಲದೆ ಈತನಿಗೆ ಭಯೋತ್ಪಾದಕ ಅಫ್ಸರ್ ಪಾಷಾ ನಂಟಿರುವುದು ಪತ್ತೆಯಾಗಿದೆ.