ಬೆಂಗಳೂರು, ಜ.27: ಕಳೆದ ಕೆಲವು ದಿನಗಳಿಂದ ಹಗ್ಗ ಜಗ್ಗಾಟದಲ್ಲಿ ನಿರತವಾಗಿದ್ದ ನಿಗಮ ಮಂಡಳಿ ನೇಮಕಾತಿ ಆದೇಶ ಪ್ರಕಟವಾಗುತ್ತಿದ್ದಂತೆಯೇ ಕಾಂಗ್ರೆಸ್‌ನಲ್ಲಿ ಅಸಮಾಧಾನ ಅತೃಪ್ತಿ ಕಾಣಿಸಿಕೊಂಡಿದೆ.
ಕೆಲವು ಶಾಸಕರು ತಮಗೆ ಈ ಹುದ್ದೆ ಬೇಡ,ನಿಮಗೆ ಸಾಧ್ಯವಾದಾಗ ಮಂತ್ರಿ ಸ್ಥಾನ ಕೊಡಿ ಅಲ್ಲಿಯವರೆಗೆ ಕಾಯುತ್ತೇವೆ ಎಂದು ಹೇಳಿದರೆ,ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಕೆಲ ಶಾಸಕರು ತಮಗೆ ಅವಕಾಶ ಸಿಗದಿರುವುದಕ್ಕೆ ಆಕ್ರೋಶಗೊಂಡಿದ್ದಾರೆ.
ಮತ್ತೊಂದೆಡೆ ಪಟ್ಟಿಯಲ್ಲಿ ಹೆಸರಿರುವ ಕೆಲ ಶಾಸಕರು ತಾವು ಕೇಳಿದ ನಿಗಮ ಮಂಡಳಿ ಸಿಗದೆ ಇರುವುದಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ.ಈ ಅಸಮಾಧಾನ ತಣಿಸಲು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಮುಂದಾಗಿದ್ದು,ಈ ಅಧಿಕಾರ ಕೇವಲ ಎರಡು ವರ್ಷ ಮಾತ್ರ.ಈ ಅವಧಿ ಮುಗಿದ ನಂತರ ಉಳಿದ ಎಲ್ಲಾ ಅರ್ಹರಿಗೂ ಅಧಿಕಾರ ನೀಡುವ ಭರವಸೆ ನೀಡಿದ್ದಾರೆ.
ಶಾಸಕರುಗಳಾದ ಸತೀಶ್‌ಸೈಲ್,ಹಂಪನಗೌಡ ಬಾದರ್ಲಿ, ವಿನಯ್ ಕುಲಕರ್ಣಿ, ಪುಟ್ಟರಂಗಶೆಟ್ಟಿ, ಎಚ್.ವೈ.ಮೇಟಿ, ಅಪ್ಪಾಜಿ ನಾಡಗೌಡ, ಬಿ.ಜಿ.ಗೋವಿಂದಪ್ಪ, ಬಿ.ಕೆ.ಸಂಗಮೇಶ್ವರ, ಬಸವನಗೌಡ ಗದ್ದಲ್, ವಿಜಯಾನಂದ ಕಾಶಪ್ಪನವರ್ ಮತ್ತು ಬಾಗೇಪಲ್ಲಿ ಸುಬ್ಬಾರೆಡ್ಡಿ,
ಅವರು ತಮಗೆ ನೀಡಿರುವ ನಿಗಮ ಮಂಡಳಿ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ.
ಕರ್ನಾಟಕ ರಾಜ್ಯ ಬೀಜ ನಿಗಮದ ಅಧ್ಯಕ್ಷ ಸ್ಥಾನ ನೀಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸುಬ್ಬಾರೆಡ್ಡಿ ತಮ್ಮ ನೇಮಕಾತಿ ಆದೇಶ ಪತ್ರ ಹಿಂತಿರುಗಿಸಿದ್ದು,ಬೆಂಬಲಿಗರ ಸಭೆ ಕರೆದಿದ್ದಾರೆ.
5 ಬಾರಿ ಗೆದ್ದಿರುವ ಹಂಪನಗೌಡ ಬಾದರ್ಲಿ, ತಾವು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ರಾಜ್ಯ ಕೈಗಾರಿಕಾ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನ ಬೇಡ ಎಂದು ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಮತ್ತೊಂದೆಡೆ ನಿಗಮ ಮಂಡಳಿ ಮೇಲೆ ಕಣ್ಣಿಟ್ಟಿದ ಹಿರಿಯ ಶಾಸಕರುಗಳು ತಮಗೆ ನಿಗಮ ಮಂಡಳಿ ಅಧ್ಯಕ್ಷಗಿರಿ ದಕ್ಕದ ಬಗ್ಗೆ ಸಿಟ್ಟುಗೊಂಡು ತಮಗೆ ಯಾವ ಮಾನದಂಡದ ಮೇಲೆ ನಿಗಮ ಮಂಡಳಿ ನೀಡಿಲ್ಲ ಎಂಬುದನ್ನು ನಾಯಕರಲ್ಲಿ ಪ್ರಶ್ನೆಯನ್ನು ಮಾಡಿದ್ದಾರೆ.ಇವರುಗಳು ಬಹಿರಂಗವಾಗಿ ಏನನ್ನು ಹೇಳದಿದ್ದರು ಸಿಟ್ಟುಗೊಂಡಿದ್ದು ಪಕ್ಷದ ವೇದಿಕೆಯಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕಲು ಮುಂದಾಗಿದ್ದಾರೆ.
ಅಸಮಾಧಾನ ಇಲ್ಲ:
ನಿಗಮ ಮಂಡಳಿ ಅಧ್ಯಕ್ಷಗಿರಿಯ ಬಗ್ಗೆ ತಮಗೆ ಯಾವುದೇ ಅಸಮಾಧಾನ ಇಲ್ಲ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ನೇಮಕಗೊಂಡಿರುವ ಗುಬ್ಬಿಯ ಶಾಸಕ ಎಸ್.ಆರ್ ಶ್ರೀನಿವಾಸ್ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಮ್ಮ ಮೇಲೆ ನಂಬಿಕೆ ಇಟ್ಟು ಅಧ್ಯಕ್ಷಗಿರಿ ನೀಡಿದ್ದಾರೆ. ನನಗೆ ಯಾವುದೇ ಅಸಮಾಧಾನ ಇಲ್ಲ ಎಂದರು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷಗಿರಿ ನೀಡಿರುವುದಕ್ಕೆ ತಮಗೆ ಅಸಮಾಧಾನ ಇದೆ ಎಂಬ ವರದಿಗಳು ಸರಿಯಲ್ಲ. ನಾನು ಯಾವುದೇ ಸ್ಥಾನಮಾನದ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಇಂತಹುದೆ ನಿಗಮ ಮಂಡಳಿ ಕೊಡಿ ಎಂದು ಕೇಳಿರಲಿಲ್ಲ. ನನಗೆ ನೀಡಿರುವ ಹುದ್ದೆ ಬಗ್ಗೆ ಯಾವುದೇ ಬೇಸರವಾಗಲಿ ಅಸಮಾಧಾನವಾಗಲಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.