ಬೆಂಗಳೂರು, ಜ.17 – ಮುಖ್ಯಮಂತ್ರಿಗಳ ಅಪ್ತ ಸಹಾಯಕ ಎಂದು ಹೇಳಿಕೊಂಡು ಸರ್ಕಾರಿ ಮಹಿಳಾ ಅಧಿಕಾರಿಗಳ ಮಾಹಿತಿ ಕಲೆ ಹಾಕುತ್ತಿದ್ದ ಖತರ್ನಾಕ್ ಖದೀಮನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ವಿಕ್ರಂ ಗೋಪಾಲಸ್ವಾಮಿ ಬಂಧಿತ ಆರೋಪಿಯಾಗಿದ್ದಾನೆ, ಮುಖ್ಯಮಂತ್ರಿ ಕಾರ್ಯದರ್ಶಿ ಪಿಎ, ಕಂದಾಯ ಸಚಿವರ ಪಿಎ ಎಂದು ಹೇಳಿಕೊಂಡು ಓಡಾಡುತ್ತಿದ್ದ ಆರೋಪಿಯು ಡಿಜಿ ಕಚೇರಿ, ಕಮಿಷನರ್ ಕಚೇರಿಯಿಂದ ಕರೆ ಮಾಡುತ್ತಿರುವುದಾಗಿ ಹೇಳಿ ಕಂದಾಯ ಇಲಾಖೆಯ ಮಹಿಳಾ ಅಧಿಕಾರಿಗಳ ಬಗ್ಗೆ ವಿವರ ಕಲೆ ಹಾಕುತ್ತಿದ್ದನು.
ಆರೋಪಿಯು ಮಾಹಿತಿ ಕಲೆಹಾಕುವುದನ್ನು ಗಮನಿಸಿ ಅಧಿಕಾರಿಯೊಬ್ಬರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿ ವಿಕ್ರಂ ಗೋಪಾಲಸ್ವಾಮಿಯನ್ನು ಬಂಧಿಸಿ ನಢಸಿದ ವಿಚಾರಣೆಯಲ್ಲಿ ಆತ ನಿವೃತ್ತ ಅಧಿಕಾರಿಯೊಬ್ಬರ ಮಗ ಎಂಬುದು ತಿಳಿದುಬಂದಿದೆ.
ವಿಧಾನಸೌಧ, ಎಂಎಸ್ ಬಿಲ್ಡಿಂಗ್ನಲ್ಲಿ ಓಡಾಡುತ್ತಿದ್ದ ಆರೋಪಿಯು ಸರ್ಕಾರಿ ಅಧಿಕಾರಿಗಳ ವಿವರ ತಿಳಿದುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದು, ವಿಧಾನಸೌಧ ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

