ಬೆಂಗಳೂರು,ಆ.2 – ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೈಬಣ್ಣದ ಬಗ್ಗೆ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ನೀಡಿರುವ ಹೇಳಿಕೆ ಕಾಂಗ್ರೆಸ್ ನಾಯಕರನ್ನು ಕೆಂಡಾಮಂಡಲರಾಗುವಂತೆ ಮಾಡಿದೆ ಪಶ್ಚಿಮ ಘಟ್ಟಗಳ ಕುರಿತು
ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ನೀಡಿದ ಹೇಳಿಕೆ ಖಂಡಿಸಿ ತೀರ್ಥಹಳ್ಳಿ ತಾಲ್ಲೂಕು ಕಚೇರಿ ಮುಂಭಾಗ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಆರಗ ಜ್ಞಾನೇಂದ್ರ ಅವರು ಮಾತನಾಡಿದ್ದರು. ಇದೇ ವೇಳೆ ಸಚಿವ ಈಶ್ವರ್ ಖಂಡ್ರೆ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಮೈ ಬಣ್ಣದ ಕುರಿತು ಅವಹೇಳನ ಮಾಡಿದ್ದರು.
ಇದರ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ಮುಗಿ ಬಿದ್ದಿದ್ದಾರೆ.ತುರ್ತು ಸುದ್ದಿಗೋಷ್ಟಿ ನಡೆಸಿದ ಪಕ್ಷದ ವಕ್ತಾರರಾದ ರಮೇಶ್ ಬಾಬು,ಮತ್ತು ರಾಮಚಂದ್ರಪ್ಪ,ಪಕ್ಷದ ಹಿರಿಯ ನಾಯಕರ ಕುರಿತ ಹೇಳಿಕೆ ಬಿಜೆಪಿಯ ಮನುವಾದಿ ನಿಲುವು ಹಾಗೂ ದಲಿತರ ಬಗೆಗಿನ ಅಸಹನೆಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.
ಸಮಾಜದಲ್ಲಿ ಜಾತಿ ಪದ್ಧತಿ ಇರಬೇಕು ಎಂಬ ಮನಸ್ಥಿತಿ ಬಿಜೆಪಿಯವರದ್ದಾಗಿದೆ. ಹೀಗಾಗಿ ಅವರು ಆಗಾಗ ತಮ್ಮ ಹಿಡನ್ ಅಜೆಂಡಾ ಬಗ್ಗೆ ಸಾರ್ವಜನಿಕವಾಗಿ ಹೇಳುತ್ತಾರೆ. ದಮನಿತ ವರ್ಗ ಶೋಷಿತವಾಗಿ ಉಳಿಯಬೇಕು ಎಂದು ಪರೋಕ್ಷವಾಗಿ ಬಿಜೆಪಿ ಪ್ರತಿಪಾದಿಸುತ್ತದೆ ಎಂದು ರಮೇಶ್ ಬಾಬು ವಾಗ್ದಾಳಿ ನಡೆಸಿದರು.
ಅನೇಕ ಬಾರಿ ಇಂತಹ ಮಾತುಗಳನ್ನು ಅನಂತಕುಮಾರ್ ಹೆಗಡೆ ಅವರು ಆಡುತ್ತಿದ್ದರು. ಅದರ ಮುಂದುವರಿದ ಭಾಗವಾಗಿ ಅರಗ ಜ್ಞಾನೇಂದ್ರ ಅವರು ಹೇಳಿಕೆ ನೀಡಿದ್ದಾರೆ. ಇದು ಸಂಘ ಪರಿವಾರ ಹಾಗೂ ಬಿಜೆಪಿ ಹೇಳಿಕೆ ಕೇವಲ ಅರಗ ಜ್ಞಾನೇಂದ್ರ ಅವರ ಹೇಳಿಕೆಯಲ್ಲ ಎಂದರು.
ತೀರ್ಥಹಳ್ಳಿ ಸಜ್ಜನ ರಾಜಕಾರಣಕ್ಕೆ ಹೆಸರಾದ ಕ್ಷೇತ್ರ ಶಾಂತವೇರಿ ಗೋಪಾಲಗೌಡರು, ಡಿ.ಬಿ ಚಂದ್ರೇಗೌಡರು, ಕಿಮ್ಮನೆ ರತ್ನಾಕರ, ಕೊಣಂದೂರು ಲಿಂಗಪ್ಪನವರು ಈ ಕ್ಷೇತ್ರದ ಶಾಸಕರಾಗಿದ್ದರು. ಇಂತಹ ಪ್ರಬುದ್ಧ ರಾಜಕಾರಣಿಗಳನ್ನು ಕೊಟ್ಟ ತೀರ್ಥಹಳ್ಳಿ ಕ್ಷೇತ್ರದಿಂದ ಅರಗ ಜ್ಞಾನೇಂದ್ರರಂತಹ ಅರೆ ಜ್ಞಾನಿಗಳು ಶಾಸಕರಾಗಿರುವುದು ದುರ್ದೈವ ಎಂದು ಬಣ್ಣಿಸಿದರು
ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೈದ್ಧಾಂತಿಕವಾಗಿ ಎದುರಿಸಲಾಗದೇ, ಅವರ ವಿರುದ್ಧ ಕೀಳು ಮಟ್ಟದ ಮಾತುಗಳನ್ನಾಡುತ್ತಿದ್ದಾರೆ. ಖರ್ಗೆ ಅವರು ವಿರೋಧ ಪಕ್ಷದ ನಾಯಕರಾಗಿ ಬಿಜೆಪಿ ಸರ್ಕಾರದ ತಪ್ಪುಗಳನ್ನು ಅನಾವರಣ ಮಾಡಿ ವಿರೋಧಿಸುತ್ತಾ ಬಂದಿದ್ದಾರೆ. ಇದರಿಂದ ವಿಚಲಿತರಾದ ಸಂಘ ಪರಿವಾರದ ನಾಯಕರು ಖರ್ಗೆ ಅವರ ಮೇಲೆ ಹಗೆತನದಿಂದ ವೈಯಕ್ತಿಕ ಟೀಕೆ ಮಾಡುತ್ತಾ ಬಂದಿದ್ದಾರೆ. ಇಂತಹ ಅವಕಾಶವಾದಿ ನಾಯಕರಿಗೆ ಜನ ಉತ್ತರ ನೀಡುತ್ತಾರೆ ಎಂದು ತಿಳಿಸಿದರು.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್
ಮೈಬಣ್ಣದ ಬಗೆಗಿನ ಈ ಅವಹೇಳನ ಕೇವಲ ಖರ್ಗೆಯವರನ್ನು ಅವಮಾನಿಸಿದ್ದಲ್ಲ, ಖರ್ಗೆಯವರ ಹೆಸರಲ್ಲಿ ಇಡೀ ಮೂಲನಿವಾಸಿ ದಲಿತರಿಗೆ ಮಾಡಿದ ಅವಮಾನ. ಬಣ್ಣದ ಬಗೆಗಿನ ಶೋಷಣೆ, ಅವಮಾನವನ್ನು ತೊಡೆದುಹಾಕಲು ಜಾಗತಿಕ ಮಟ್ಟದಲ್ಲಿ ಚಳವಳಿಗಳು ನಡೆದಿವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಮೈಬಣ್ಣದ ಬಗ್ಗೆ, ದೈಹಿಕ ರೂಪದ ಬಗ್ಗೆ ಅವಮಾನಿಸಿದರೆ ಮಹಾ ಅಪರಾಧಿಯಂತೆ ಕಾಣಲಾಗುತ್ತದೆ. ಆದರೆ, ಇಲ್ಲಿನ ಬಿಜೆಪಿಗರು ದಲಿತರನ್ನು, ದಲಿತರ ಮೈಬಣ್ಣವನ್ನು, ರೂಪವನ್ನು ಅವಮಾನಿಸುವುದು ಹೆಗ್ಗಳಿಕೆಯಾಗಿ ನೋಡುತ್ತದೆ’ ಎಂದು ಟೀಕಿಸಿದೆ