ನವದೆಹಲಿ – ಆರ್ಥಿಕ ಅಪರಾಧಗಳ ವಿಚಾರದಲ್ಲಿ ಜಾರಿ ನಿರ್ದೇಶನಾಲಯದ ( ಇಡಿ)ಕಾರ್ಯವೈಖರಿಗೆ ಸುಪ್ರೀಂ ಕೋರ್ಟ್ ಕೆಂಡಾಮಂಡಲವಾಗಿದೆ. ಜೈಲಿನಲ್ಲಿರುವ ಆರೋಪಿ ಜಾಮೀನು ಪಡೆಯಲು ಸಾಧ್ಯವಾಗದಂತೆ ಹಲವಾರು ನೆಪಗಳನ್ನು ಮುಂದಿಡುವುದು ಅಕ್ರಮ ಎಂದು ಹೇಳಿರುವ ಕೋರ್ಟ್ ಇಡಿ ಗೆ ಚಾಟಿ ಬೀಸಿದೆ.
ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆಯಲ್ಲಿ ಬಂದಿತನಾಗಿರುವ ಜಾರ್ಖಂಡ ಮಾಜಿ ಮುಖ್ಯಮಂತ್ರಿ ಹೇಮಂತ್ ಸೂರೇನ್ ಅವರ ಆಪ್ತ ಪ್ರೇಮ್ ಪ್ರೇಮ್ ಪ್ರಕಾಶ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಸಂಜೀವ್ ಕುಮಾರ್ ಮತ್ತು ದೀಪಾಂಕರ್ ದತ್ತ ಅವರಿಂದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಹೈ ಕೋರ್ಟ್ ತಮಗೆ ಜಾಮೀನು ಮಂಜೂರು ಮಾಡಲು ನಿರಾಕರಿಸಿರುವ ವಿಷಯ ತಿಳಿಸಿದ ಅರ್ಜಿದಾರರ ಪರ ವಕೀಲರು ಈ ವಿಷಯದಲ್ಲಿ ಜಾರಿ ನಿರ್ದೇಶನಾಲಯ ಅನಗತ್ಯ ಹಸ್ತಕ್ಷೇಪ ಮಾಡುತ್ತಿದೆ ಎಂದು ಆಪಾದಿಸಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯ ಪೀಠ ಆರೋಪಿ ಜಾಮೀನು ಪಡೆಯಲು ಸಾಧ್ಯವಾಗದಂತೆ ಜಾರಿ ನಿರ್ದೇಶನಾಲಯ ವಿವಿಧ ರೀತಿಯಲ್ಲಿ ತನಿಖೆ ನಡೆಸುವುದು. ಪೂರ್ಣಗೊಂಡಿರುವ ತನಿಖೆಯ ಬಗ್ಗೆ ಮರು ತನಿಖೆ ಕುರಿತು ಪ್ರಸ್ತಾಪಿಸುವುದು ಆರೋಪ ಪಟ್ಟಿ ಸಲ್ಲಿಸಿದ ನಂತರ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸುವುದು ಅಪರಾಧಿಯನ್ನು ಜಾಮೀನು ಪಡೆಯದಂತೆ ಅಡ್ಡಿಪಡಿಸುವುದಾಗಿದೆ ಎಂದು ತರಾಟೆಗೆ ತೆಗೆದುಕೊಂಡಿತು.
ತನಿಖೆ ಪೂರ್ಣಗೊಳ್ಳುವವರೆಗೆ ವಿಚಾರಣೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಹೀಗಾಗಿ ಆರೋಪಿ ಸ್ಥಾನದಲ್ಲಿ ನಿಂತಿರುವ ವ್ಯಕ್ತಿ ಜಾಮೀನು ಪಡೆಯಲು ಅವಕಾಶವಿಲ್ಲ ಇದು ಗೊತ್ತಿದ್ದೂ ಜಾರಿ ನಿರ್ದೇಶನಾಲಯ ಪೂರ್ಣ ಪ್ರಮಾಣದ ಆರೋಪ ಪಟ್ಟಿ ಸಲ್ಲಿಸಿದ ನಂತರ ಹೆಚ್ಚುವರಿಯಾಗಿ ಮತ್ತೊಂದು ಮಗದೊಂದು ಆರೋಪ ಪಟ್ಟಿ ಸಲ್ಲಿಸುವ ಮೂಲಕ ಕಾನೂನಿನ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಅಭಿಪ್ರಾಯ ಪಟ್ಟಿದೆ.