Tesla, Twitter, SpaceX ಗಳನ್ನು ಒಳಗೊಂಡು ಹಲವು ಸಂಸ್ಥೆ ಗಳ ಮಾಲೀಕತ್ವ ಹೊಂದಿರುವ ವಿಶ್ವದ ಅತಿ ದೊಡ್ಡ ಶ್ರೀಮಂತ, ಎಲಾನ್ ಮಸ್ಕ್ (Elon Musk) ದಾಖಲೆಯ ನಷ್ಟವನ್ನು ಅನುಭವಿಸಿದ್ದಾರೆ. ಅಮೇರಿಕಾದ ಪ್ರಖ್ಯಾತ ಬ್ಯುಸಿನೆಸ್ ಮ್ಯಾಗಜೀನ್ ಆಗಿರುವ Forbes ವರದಿ ಮಾಡಿರುವ ಪ್ರಕಾರ, ನವೆಂಬರ್ 2021 ರಿಂದ ಡಿಸೆಂಬರ್ 2022 ರವರೆಗೆ ಅವರು ಅನುಭವಿಸಿದ ನಷ್ಟ ಸುಮಾರು 165 ಬಿಲಿಯನ್ ಡಾಲರ್. ಆದರೆ Guinness Records ಮತ್ತು ಇನ್ನಿತರ ಮೂಲಗಳ ಪ್ರಕಾರ, ಈ ನಷ್ಟ ಸುಮಾರು 200 ಬಿಲಿಯನ್ ಡಾಲರ್! 2021 ರಲ್ಲಿ 320 ಬಿಲಿಯನ್ ಡಾಲರ್ ಆಗಿದ್ದ ಅವರ ಒಟ್ಟು ಆಸ್ತಿಯ ಮೊತ್ತ ಜನವರಿ 2023 ರವರೆಗೆ 138 ಬಿಲಿಯನ್ ಡಾಲರ್ ಗೆ ಇಳಿದಿದೆ!
ಯಾಕಿಷ್ಟು ದೊಡ್ಡ ನಷ್ಟವಾಯ್ತು?
ಏಪ್ರಿಲ್ 14, 2022 ರಂದು ಎಲಾನ್ ಮಸ್ಕ್ 44 ಬಿಲಿಯನ್ ಡಾಲರ್ ಕೊಟ್ಟು ಟ್ವಿಟರ್ ಅನ್ನು (ಮುಕ್ತವಾಗಿ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಇರುವ ಆನ್ಲೈನ್ ವೇದಿಕೆ) ಖರೀದಿಸಿದ್ದರು. ಇಷ್ಟು ದೊಡ್ಡ ಮೊತ್ತವನ್ನು ಟ್ವಿಟರ್ ಮೇಲೆ ಹೂಡಿದ್ದ ಮಸ್ಕ್ ಅವರ ನಡೆ ಷೇರುಪೇಟೆಯ ಹೂಡಿಕೆದಾರರಲ್ಲಿ ಪ್ರಶ್ನೆಗಳನ್ನು ಹುಟ್ಟಿಸಿದ್ದಿರಬಹುದು. ಯಾಕೆಂದರೆ, ಟೆಸ್ಲಾ ಕಂಪನಿಯ ಷೇರ್ ಗಳಲ್ಲಿ ಎಲಾನ್ ಮಸ್ಕ್ ಬಹು ದೊಡ್ಡ ಪಾಲನ್ನು ಹೊಂದಿದ್ದಾರೆ . ಟ್ವಿಟರ್ ಮೇಲೆ ಇಷ್ಟು ದೊಡ್ಡ ಮೊತ್ತ ಹೂಡಿದ ಕಾರಣ ಟೆಸ್ಲಾ ಮೇಲಿನ ಅವರ ಗಮನ ಕಡಿಮೆ ಆಗಬಹುದೇನೋ ಎಂಬ ಆತಂಕ ಟೆಸ್ಲಾ ಹೂಡಿಕೆದಾರರಲ್ಲಿ ಮೂಡಿರಬಹುದು ಎನ್ನಲಾಗಿದೆ.
ಅಲ್ಲದೆ, 2022 ರಲ್ಲಿ ಟೆಸ್ಲಾ ಷೇರ್ ಗಳ ಮೌಲ್ಯದಲ್ಲಿ 65% ಇಳಿಕೆ ಕಂಡು ಬಂದಿ ತ್ತು. ಆ ವರ್ಷವಿಡೀ ಮಾರಾಟವಾದ ಟೆಸ್ಲಾ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಕೇವಲ 1.3 ಮಿಲಿಯನ್ ಮಾತ್ರ. ಇವೆಲ್ಲದರ ಜೊತೆಗೆ, ಎಲಾನ್ ಮಸ್ಕ್ ಅವರ ಟ್ವಿಟರ್ ಖರೀದಿಯ ಬಗ್ಗೆ ಮತ್ತು ಆ ವೇದಿಕೆಯ ಕಂಟೆಂಟ್ ಮಾಡರೇಷನ್ ಪಾಲಿಸಿಗಳನ್ನು ಬದಲಿಸುವ ನಿರ್ಧಾರದ ಕುರಿತು ಜನರು ಮಿಶ್ರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದರು. ಈ ಅಹಿತ ಬೆಳವಣಿಗೆ ಕೂಡ ಹೂಡಿಕೆದಾರರು ಎಲಾನ್ ಮಸ್ಕ್ ಅವರ ಮೇಲೆ ಇಟ್ಟಿದ್ದ ಅಭಿಪ್ರಾಯವನ್ನು ಸಡಿಲಗೊಳಿಸಲು ಕಾರಣವಾಗಿರಬಹುದು. ಇವೆಲ್ಲವುದರ ಪರಿಣಾಮವೇ ಅವರು ಇಷ್ಟು ದೊಡ್ಡ ನಷ್ಟವನ್ನು ಅನುಭವಿಸಲು ಕಾರಣವಾಗಿರಬಹುದು ಎನ್ನಲಾಗಿದೆ.
ಈ ನಷ್ಟದಿಂದ ವಿಶ್ವದ ಅತಿ ದೊಡ್ಡ ಶ್ರೀಮಂತರ ಪಟ್ಟಿಯಲ್ಲಿ, ತಮ್ಮ ಸ್ಥಾನವನ್ನು French luxury goods company LVMH ನ ಚೀಫ್ ಆಗಿರುವ, 188 ಬಿಲಿಯನ್ ಡಾಲರ್ ಒಡೆಯ ರಾಗಿರುವ ಬರ್ನಾರ್ಡ್ ಅರ್ನಾಲ್ಟ್ ಗೆ ಬಿಟ್ಟುಕೊಡಬೇಕಾಗಿ ಬಂದರೂ, 178 ಬಿಲಿಯನ್ ಡಾಲರ್ ಮೊತ್ತದ ಆಸ್ತಿಯನ್ನು ಹೊಂದಿರುವ ಎಲಾನ್ ಮಸ್ಕ್ ಈಗಲೂ ಆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
“ದೀರ್ಘಾವಧಿಯ ಮೂಲಭೂತ ಅಂಶಗಳು [ಟೆಸ್ಲಾದಲ್ಲಿ] ಅತ್ಯಂತ ಪ್ರಬಲವಾಗಿವೆ. ಅಲ್ಪಾವಧಿಯ ಮಾರುಕಟ್ಟೆ ಹೆಚ್ಚು ಅನಿರೀಕ್ಷಿತವಾಗಿದೆ” ಎಂದು ಡಿಸೆಂಬರ್ 2022 ರಲ್ಲಿ ಷೇರುಮಾರುಕಟ್ಟೆಯ ವರ್ಷಾಂತ್ಯದ ವೇಳೆ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ.