Recession, ಆಗಾಗ ಐಟಿ ಉದ್ಯೋಗ ಕ್ಷೇತ್ರದಲ್ಲಿ ಕೇಳಿಬರುವ ಭಯ ಹುಟ್ಟಿಸುವ ಪದ. ಕೆಲವು ವರ್ಷಗಳ ಕಾಲ ಮರೆಯಾಗಿದ್ದ ಈ ಪದ, ಈಗ ಮತ್ತೆ ಕೇಳಿಬರುತ್ತಿದೆ. ಈಗಾಗಲೇ ಅಮೇರಿಕಾದಲ್ಲಿ ಅಮೆಜಾನ್, ಟ್ವಿಟ್ಟರ್, ಮೆಟಾ ಸೇರಿದಂತೆ ಹಲವು ದೊಡ್ಡ ದೊಡ್ಡ ಐಟಿ ಕಂಪನಿಗಳು ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಸಾವಿರಾರು ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿವೆ. ರಿಸೆಶನ್ ಮತ್ತು ಜಾಗತಿಕ ಸ್ಥೂಲ ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ಕಂಪನಿಗಳು ಹೊಸ ನೇಮಕಾತಿಯನ್ನು ಸ್ಥಗಿತಗೊಳಿಸಿರುವುದರಿಂದ ಉದ್ಯೋಗಾರ್ಥಿಗಳಿಗೆ ಹೊಸ ಉದ್ಯೋಗ ಪಡೆಯುವುದು ಕಷ್ಟವಾಗುತ್ತಿದೆ.
ಸಮಾಧಾನ ನೀಡುವ ಸಣ್ಣ ವಿಚಾರವೆಂದರೆ ಸದ್ಯ ನಡೆಯುತ್ತಿರುವ ವಿಂಟರ್ ಫಂಡಿಂಗ್ ನಲ್ಲಿ ಉದ್ಯೋಗ ಕಳೆದುಕೊಂಡ ಹಲವರಿಗೆ ಮುಂದಿನ ಮೂರೇ ತಿಂಗಳಲ್ಲಿ ಹೊಸ ಉದ್ಯೋಗವೂ ದೊರಕಿದೆ. ಆದರೆ ಈ ಸಮಾಧಾನ ಹೆಚ್ಚು ದಿನ ಇರಲಾರದು. ಹೊಸ ಉದ್ಯೋಗ ಅರಸುತ್ತಿರುವವರಿಗೆ ಮತ್ತು H1- B ವೀಸಾ ಹೊಂದಿರುವ ಭಾರತೀಯ ಮೂಲದವರಿಗೆ 2023 ಮತ್ತಷ್ಟು ಕಷ್ಟಕರವಾಗಲಿದೆ. ನೀಡಿದ ಆರು ತಿಂಗಳ ಗಡುವಿನಲ್ಲಿ ಹೊಸ ಉದ್ಯೋಗ ದೊರೆಯದಿದ್ದರೆ ಅಲ್ಲಿಗೇ ಅವರ ಅಮೆರಿಕದ ಕನಸನ್ನು ಮೊಟಕುಗೊಳಿಸಿ ವಾಪಸ್ಸಾಗಬೇಕಾಗುತ್ತದೆ.
US Citizenship and Immigration Services (USCIS) ನ ಹೊಸ ಫೀ ನಿಯಮದ ಪ್ರಕಾರ ಉದ್ಯೋಗ ಆಧಾರಿತ ವೀಸಾಗಳ ಅರ್ಜಿ ಶುಲ್ಕವನ್ನು $10 ರಿಂದ $215 ಕ್ಕೆ ಏರಿಸಲಾಗಿದೆ. ” ಮೊದಲ ನೋಟದಲ್ಲಿ ಈ ಹೆಚ್ಚಳವು ಭಾರಿ ಏರಿಕೆ ಎನಿಸಿದರೂ, $೧೦ ಶುಲ್ಕವನ್ನು ವೀಸಾ ಪ್ರಕ್ರಿಯೆಯ ವೆಚ್ಚದ ಒಂದು ಸಣ್ಣ ಭಾಗವನ್ನು ಸರಿದೂಗಿಸಲು ಸ್ಥಾಪಿಸಲಾಗಿತ್ತು” ಎನ್ನುವ ಹೇಳಿಕೆಯ ನೀಡಿ, ಶುಲ್ಕದ ಏರಿಕೆಯ ಬಗ್ಗೆ ಸಮರ್ಥನೆ ನೀಡಿದೆ USCIS.
ಈ ಅಹಿತ ಬೆಳವಣಿಗೆಯಿಂದ ಭಾರಿ ಹೊಡೆತ ಪಡೆದ ಹಲವು H1-B ವೀಸಾ ಹೊಂದಿದ್ದ ಭಾರತೀಯ ಮೂಲದ ಉದ್ಯೋಗಿಗಳು ತಮ್ಮ ನೋವನ್ನು ವಿಶ್ವದ ಅತಿ ದೊಡ್ಡ ವೃತ್ತಿಪರ ಆನ್ಲೈನ್ ನೆಟ್ವರ್ಕ್ ಆಗಿರುವ LinkedIn ನಲ್ಲಿ ಹಂಚಿಕೊಂಡಿದ್ದಾರೆ.
ಹಾಗಾಗಿ ಅಮೇರಿಕಾದಲ್ಲಿ ಉದ್ಯೋಗದ ಕನಸು ಕಾಣುವ ಮುನ್ನ ಒಂದಲ್ಲ ಎರಡು ಬಾರಿ ಯೋಚಿಸಿ!