ಬೆಂಗಳೂರು: ಬೆಂಗಳೂರೂ ಸೇರಿ ರಾಜ್ಯದ ಹಲವೆಡೆ ಇನ್ನೂ ಎರಡು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಹಲವೆಡೆ ಶನಿವಾರ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ 32 ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರು ನಗರದಲ್ಲಿ ಶುಕ್ರವಾರ ನೈಋತ್ಯ ಮುಂಗಾರು ಮಳೆ ಧಾರಾಕಾರವಾಗಿ ಸುರಿದಿದೆ. ಸಂಜೆ ಆರರ ಹೊತ್ತಿಗೆ ಗುಡುಗು, ಮಿಂಚು ಮತ್ತು ಬಿರುಸಿನ ಗಾಳಿಸಹಿತ ಭರ್ಜರಿ ಮಳೆಗೆ ಸುಮಾರು 40ಕ್ಕೂ ಹೆಚ್ಚು ಮರಗಳು ಮುರಿದುಬಿದ್ದಿವೆ.
ಬೆಂಗಳೂರಿನ ಓಕಳೀಪುರಂ ಅಂಡರ್ ಪಾಸ್, ಶಿವಾನಂದ ರೈಲ್ವೆ ಕೆಳ ಸೇತುವೆ, ಅನಂದ ರಾವ್ ವೃತ್ತ, ನೃಪತುಂಗ ರಸ್ತೆ, ಮೈಸೂರು ರಸ್ತೆ, ಸುಲ್ತಾನ್ ಪಾಳ್ಯದ ಮುಖ್ಯ ರಸ್ತೆ, ಶಿವಾಜಿನಗರ, ಶಾಂತಿನಗರ ಡಬಲ್ ರೋಡ್ ಸೇರಿದಂತೆ ಪ್ರಮುಖ ರಸ್ತೆ ಮತ್ತು ಅಂಡರ್‌ಪಾಸ್‌ಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.