ಬೆಂಗಳೂರು,ಸೆ.10-
ಯುವತಿಯನ್ನು ಬಳಸಿಕೊಂಡು ಅಧಿಕಾರಿಗಳು ಉದ್ಯಮಿಗಳು ಮತ್ತು ರಾಜಕಾರಣಿಗಳನ್ನು ಹನಿ ಟ್ರ್ಯಾಪ್ ಬಲೆಗೆ ಕೆಡವಿ ಸುಲಿಗೆ ಮಾಡುತ್ತಿದ್ದ ಆರೋಪದಲ್ಲಿ ದಲಿತ ಸೇನೆ ಅಧ್ಯಕ್ಷ ಹಣಮಂತ ಯಳಸಂಗಿ ಸೇರಿದಂತೆ ಆರು ಮಂದಿಯನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.
ಹನಿಟ್ರ್ಯಾಪ್ ಆರೋಪದಡಿ ಮಹಾರಾಷ್ಟ್ರ ಮೂಲದ ಸಂತ್ರಸ್ತೆ ಯುವತಿ ಕಲಬುರ್ಗಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ಎಂಟು ಮಂದಿ ವಿರುದ್ಧ ದೂರು ದಾಖಲಿಸಿದ್ದರು.
ಈ ಪ್ರಕರಣ ಕಲಬುರ್ಗಿ ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ಸಚಿವ ಪ್ರಿಯಾಂಕ ಖರ್ಗೆ ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸವಾಲಾಗಿ ಪರಿಗಣಿಸಿದ ಪೊಲೀಸರು ಮೊದಲಿಗೆ ಪ್ರಭುಲಿಂಗ ಹಿರೇಮಠ ಮತ್ತು ರಾಜು ಲೇಂಗಟಿನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದರು.
ಇವರು ನೀಡಿದ ಮಾಹಿತಿ ಹಾಗೂ ತನಿಖೆಯಲ್ಲಿ ಲಭ್ಯವಾದ ಸಾಕ್ಷ್ಯಾಧಾರ, ಸಂತ್ರಸ್ತೆಯರ ಹಾಗೂ ಬಂಧಿತ ಇಬ್ಬರು ಆರೋಪಿಗಳ ಹೇಳಿಕೆಯನ್ನು ಆಧರಿಸಿ ಉಳಿದ ಆರು ಜನರನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ‘ ತಿಳಿಸಿದ್ದಾರೆ
ಇಲ್ಲಿಯವರೆಗೂಷಹನಿಟ್ರ್ಯಾಪ್ ಒಳಗಾಗಿದ್ದಾಗಿ ಯಾವುದೇ ಉದ್ಯಮಿಗಳು, ನೌಕರರು ಮುಂದೆ ಬಂದು ದೂರು ಕೊಟ್ಟಿಲ್ಲ. ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿದ್ದವರು ಮುಂದೆ ಬಂದು ದೂರು ಕೊಟ್ಟರೆ ಅವರ ಗೋಪ್ಯತೆಯನ್ನು ಕಾಪಾಡಿ ವಿಚಾರಣೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು.