ಬೆಂಗಳೂರು,ಸೆ.10-ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ನೀಡಿರುವ ಅಂತಿಮ ಗಡುವಿಗೆ ಒಂದು ವಾರ ಮಾತ್ರ ಬಾಕಿ ಇದೆ.
ಸೆಪ್ಟೆಂಬರ್ 15ಕ್ಕೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಕೊಟ್ಟಿರುವ ಗಡುವು ಮುಗಿಯಲಿದೆ.ರಾಜ್ಯದಲ್ಲಿ ಒಟ್ಟಾರೆ 2 ಕೋಟಿಯಷ್ಟು ವಾಹನಗಳಿದ್ದು, ಇದರಲ್ಲಿ ಇಲ್ಲಿಯವರೆಗೆ 51 ಲಕ್ಷ ವಾಹನಗಳು ಮಾತ್ರ ಹೆಚ್‌ಎಸ್‌ಆರ್‌ಪಿ ನಂಬರ್ ಹಾಕಿಸಿದ್ದಾರೆ.
ಉಳಿದ 1.49 ಕೋಟಿ ವಾಹನಗಳು ಇನ್ನೂ ಹೆಚ್‌ಎಸ್‌ಆರ್‌ಪಿ ಹಾಕಿಸಿಲ್ಲ.
ಸೆ.16ರಿಂದಲೇ ನಮ್ಮ ಇಲಾಖೆಯಿಂದ ಎಲ್ಲಾ ಜಿಲ್ಲೆಗಳಲ್ಲೂ ಸ್ಪೆಷಲ್ ಡ್ರೈವ್ ಮಾಡಿ 500 ರೂ. ದಂಡ ಹಾಕುತ್ತೇವೆ. ಮೊದಲ ಸಲ 500 ರೂ. ದಂಡ ವಿಧಿಸಿದರೇ ಎರಡನೇ ಸಲಕ್ಕೆ 1 ಸಾವಿರ ರೂ.ದಂಡ ವಿಧಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರ ಇಡೀ ದೇಶದಲ್ಲೇ ಏಕ ಮಾದರಿಯ ನಂಬರ್ ಪ್ಲೇಟ್ ಇರಬೇಕೆಂಬ ದೃಷ್ಟಿಯಿಂದ ಮತ್ತು ಅಪರಾಧ ಕೃತ್ಯಗಳ ಬಗ್ಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್‌ನಿಂದ ಮಾಹಿತಿ ಸಿಗಲಿದೆ ಎಂಬ ಉದ್ದೇಶದಿಂದ ಹೆಚ್‌ಎಸ್‌ಆರ್‌ಪಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
ಇದನ್ನು ಜನ ಇನ್ನೂ ತಮ್ಮ ವಾಹನಗಳಿಗೆ ಹಾಕಿಸಿಕೊಳ್ಳದೇ ಸುಮ್ಮನೇ ಇದ್ದು ಕೊನೇ ಗಳಿಗೆಯಲ್ಲಿ ಆನ್‌ಲೈನ್‌ನಲ್ಲಿ ಬುಕ್ ಮಾಡೋದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಒಂದು ವಾರ ಕಾಲಾವಕಾಶ ಇದೆ.ಬಳಿಕ ನಾವು ದಂಡ ಹಾಕುತ್ತೇವೆ. ಜೊತೆಗೆ ಸಂಚಾರ ಪೊಲೀಸರು ದಂಡ ಹಾಕಲಿದ್ದಾರೆ ಎಂದು ಸಾರಿಗೆ ಇಲಾಖೆ ತಿಳಿಸಿದೆ