ದೇಶದಲ್ಲೇ ಅತ್ಯಂತ ಪ್ರತಿಷ್ಠಿತ ಎನ್ನಲಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ದಿವಾಳಿಯ ಅಂಚು ತಲುಪಿದೆ.ತನ್ನ ನೌಕರರಿಗೆ ಸಂಬಳ ನೀಡಲೂ ಸಾಧ್ಯವಾಗದ ಪರಿಸ್ಥಿತಿ ತಲುಪಿದೆ. ನೌಕರರಿಗೆ ಭವಿಷ್ಯ ನಿಧಿ ವಂತಿಗೆ ಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಪಿ.ಎಫ್. ಮಂಡಳಿ ನೋಟಿಸ್ ನೀಡಿದೆ. ಇದರಿಂದ ಮುಜುಗರಕ್ಕೆ ಸಿಲುಕಿರುವ ಸಾರಿಗೆ ಸಂಸ್ಥೆ ತನ್ನ ಆಸ್ತಿಯನ್ನು ಒತ್ತೆಯಿಟ್ಟು ವಂತಿಗೆ ಪಾವತಿಸುತ್ತಿದೆ ಇದೀಗ ಬೆಂಗಳೂರಿನ ಪ್ರಮುಖ ಸ್ಥಳದಲ್ಲಿರುವ ಶಾಂತಿನಗರ ಬಸ್ ನಿಲ್ದಾಣದ ಆಸ್ತಿಯನ್ನು ಖಾಸಗಿ ಸಂಸ್ಥೆಯೊಂದಕ್ಕೆ ಅಡಮಾನ ಮಾಡಿದ್ದು ಇದರಿಂದ ಬಂದ ಹಣವನ್ನು ಪಿಎಫ್ ವಂತಿಗೆ ಪಾವತಿಸಲು ಬಳಸಲಾಗಿದೆ.
ಸಾರಿಗೆ ಸಂಸ್ಥೆಯ ಈ ಪರಿಸ್ಥಿತಿಗೆ ಪ್ರಮುಖ ಕಾರಣ ದುಬಾರಿಯಾದ ತೈಲ ಬೆಲೆ. ಇದಕ್ಕೆ ಹೊಂದಿಕೆಯಾಗುವ ರೀತಿಯಲ್ಲಿ ಪ್ರಯಾಣ ಧರ ಹೆಚ್ಚಳಕ್ಕೆ ಪ್ರಸ್ತಾಪ ಮಾಡಿದ್ದು ಇದಕ್ಕೆ ಅನುಮೋದನೆ ನೀಡಲು ಸರ್ಕಾರ ನಿರಾಕರಿಸಿದೆ. ಈಗಾಗಲೆ ಅಗತ್ಯ ವಸ್ತುಗಳ ಬೆಲೆಯೇರಿಕೆಯಾಗಿದ್ದು ಇದರ ನಡುವೆ ಪ್ರಯಾಣ ಧರವನ್ನೂ ಹೆಚ್ಚಳ ಮಾಡಿದರೆ ಸರ್ಕಾರ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ದರ ಹೆಚ್ಚಳ ಪ್ರಸ್ತಾಪವನ್ನು ಮುಖ್ಯಮಂತ್ರಿಗಳು ತಿರಸ್ಕರಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಎಲ್ಲಾ ಸಾರಿಗೆ ನಿಗಮಗಳು ನಷ್ಟದ ಸುಳಿಗೆ ಸಿಲುಕಿವೆ.
ಇದರ ಹೊರತಾಗಿ ಕೋವಿಡ್ ಸಾಂಕ್ರಾಮಿಕ, ಆಡಳಿತದಲ್ಲಿನ ಅವ್ಯವಸ್ಥೆ, ವ್ಯಾಪಕ ಭ್ರಷ್ಟಾಚಾರದಿಂದಾಗಿ ಕೆಎಸ್ಆರ್‌ಟಿಸಿ ಸೇರಿದಂತೆ ರಾಜ್ಯದ 4 ಸಾರಿಗೆ ನಿಗಮಗಳಿಂದ ಮಾರ್ಚ್ ಅಂತ್ಯದ ವೇಳೆ 2,130 ಕೋಟಿ ರೂ. ನಷ್ಟವಾಗಬಹುದು ಎಂದು ಅಂದಾಜಿಸಿದ್ದು ಈಗ ಈ ಅಂದಾಜಿನ ಮಿತಿಯನ್ನೂ ಮೀರಿ ನಷ್ಟ ಅನುಭವಿಸುತ್ತಿವೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಸಾರಿಗೆ ನಿಗಮಗಳ ನಷ್ಟ ದೂರವಾಗಿಸಿ, ಲಾಭದಾಯಕ ಹಾದಿ ಕಂಡುಕೊಳ್ಳಲು ವರದಿ ನೀಡುವಂತೆ ರಚಿಸಲಾದ ಸಮಿತಿಗೆ ಅಧ್ಯಕ್ಷರಾಗಿರುವ ನಿವೃತ್ತ ಅಧಿಕಾರಿ ಎಂ. ಆರ್.ಶ್ರೀನಿವಾಸ ಮೂರ್ತಿ ನೇತೃತ್ವದ ಸಮಿತಿ ಹಲವಾರು ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.