ಬೆಂಗಳೂರು,ಜು.7-ಕುಡಿತದ ಚಟಕ್ಕೆ ದೇವಿಯ ತಾಳಿ ಕದಿಯುತ್ತಿದ್ದ ಖದೀಮನನ್ನು ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಚಂದ್ರ (35) ಬಂಧಿತ ಆರೋಪಿಯಾಗಿದ್ದಾನೆ.
ಬಸ್ ಹತ್ತಿಕೊಂಡು ದೇವಸ್ಥಾನಗಳಿಗೆ ತೆರಳುತ್ತಿದ್ದ ಖದೀಮ, ಮೊದಲು ದೇವಿಗೆ ಕೈ ಮುಗಿಯುತ್ತಿರುವ ಹಾಗೆ ನಾಟಕ ಮಾಡುತ್ತಿದ್ದ. ನಂತರ ಸುತ್ತಮುತ್ತ ಯಾರು ಇಲ್ಲದಿರುವುದನ್ನು ಗಮನಿಸಿಕೊಂಡು ಗರ್ಭಗುಡಿಗೆ ನುಗ್ಗುತ್ತಿದ್ದ.
ನಂತರ ದೇವಿಗೆ ಹಾಕಿರುವ ತಾಳಿಯನ್ನು ಕದ್ದುಕೊಂಡು ಪರಾರಿಯಾಗುತ್ತಿದ್ದ. ತಾಳಿಯನ್ನು ಎರಡರಿಂದ ಮೂರು ಸಾವಿರಕ್ಕೆ ಮಾರಿ ಕಂಠಪೂರ್ತಿ ಕುಡಿಯುತ್ತಿದ್ದ. ನಂತರ ಬೈಯಪ್ಪನಹಳ್ಳಿ ಬಳಿ ಇರುವ ಮನೆಗೆ ತೆರಳುತ್ತಿದ್ದ.
ಮರುದಿನ ಮತ್ತೆ ಬಸ್ ಹತ್ತಿ ಮತ್ತೊಂದು ಏರಿಯಾಗೆ ಹೋಗುತ್ತಿದ್ದ. ಅಲ್ಲೂ ಕೂಡ ದೇವಸ್ಥಾನ ಹುಡುಕಿ ಕಳ್ಳತನ ಮಾಡುತ್ತಿದ್ದ. ಹೆಣ್ಣು ದೇವತೆಯನ್ನೇ ಗುರಿಯಾಗಿಸಿಕೊಂಡು ಚಿನ್ನಾಭರಣ ಕದಿಯುತ್ತಿದ್ದ. ಹೀಗೆ ಕಳೆದ ಜುಲೈ 4ರ ಬೆಳಗ್ಗೆ 7.30ರ ಸುಮಾರಿಗೆ ಮಾರತಹಳ್ಳಿಯಲ್ಲಿರುವ ಚೌಡೇಶ್ವರಿ ದೇವಸ್ಥಾನದಲ್ಲಿ ದೇವಿಯ ತಾಳಿ ಕಳ್ಳತನ ಮಾಡಿದ್ದ.
ಬೆಳಗ್ಗೆ ದೇವರಿಗೆ ಕೈ ಮುಗಿಯುವ ನೆಪದಲ್ಲಿ ಬಂದಿದ್ದ ಆಸಾಮಿ, ಪೂಜಾರಿ ಗರ್ಭಗುಡಿಯಿಂದ ಹೊರಗೆ ಹೋಗ್ತಿದ್ದಂತೆ ಕೈಚಳಕ ತೋರಿಸಿದ್ದ. ಅರ್ಚಕರು ಬಂದು ನೋಡಿದಾಗ ವಿಚಾರ ಗೊತ್ತಾಗಿದೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆ ನಡೆದ ಎರಡೇ ಗಂಟೆಯಲ್ಲೇ ಮಾರತಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನಿಂದ ಕಳ್ಳತನವಾಗಿದ್ದ ಒಂದು ತಾಳಿ ವಶಕ್ಕೆ ಪಡೆಯಲಾಗಿದೆ. ಈತ ಈ ಹಿಂದೆ ಬನಶಂಕರಿ ದೇವಸ್ಥಾನದಲ್ಲೂ ಕೂಡ ಕಳ್ಳತನ ಮಾಡಿದ್ದ. ಆರೋಪಿ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.