ಬೆಂಗಳೂರು,ಜು.30-ಗುರಾಯಿಸಿದ್ದರಿಂದ ಉಂಟಾದ ದ್ವೇಷದಿಂದ ನಡೆದ ಜಗಳ ವಿಕೋಪಕ್ಕೆ ತಿರುಗಿ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾದ ದಾರುಣ ಘಟನೆ ನಿನ್ನೆ ಮಧ್ಯರಾತ್ರಿ ಆಶೋಕನಗರದ ಆನೇಪಾಳ್ಯದಲ್ಲಿ ನಡೆದಿದೆ.
ಆನೇಪಾಳ್ಯದ ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದ ಇರ್ಫಾನ್ (28) ಕೊಲೆಯಾದವರು. ಕೃತ್ಯ ನಡೆಸಿದ ಖಾಸಿಂನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಇವರಿಬ್ಬರೂ ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದು ಮುಖಾಮುಖಿಯಾದ ವೇಳೆಗೆ ಕ್ಷುಲ್ಲಕ ವಿಚಾರವಾಗಿ ಜಗಳ ನಡೆದು ದ್ವೇಷ ಬೆಳೆದಿದ್ದು ಕಳೆದ ಒಂದು ವರ್ಷದಿಂದ ಇಬ್ಬರು ಮಾತು ಬಿಟ್ಟಿದ್ದರು.
ಹಳೇ ದ್ವೇಷದಿಂದ ಕುದಿಯುತ್ತಿದ್ದ ಇಬ್ಬರು ಆನೇಪಾಳ್ಯದ ಬಳಿ ರಾತ್ರಿ 11ರ ವೇಳೆ ಎದುರುಬದುರಾಗಿ ಬಂದಿದ್ದು ಮತ್ತೆ ಜಗಳ ಉಂಟಾಗಿ ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡು ಇರ್ಫಾನ್ ತೊಡೆಗೆ ಚಾಕುವಿನಿಂದ ಇರಿದ ಖಾಸಿಂ ಪರಾರಿಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡ ಆತನನ್ನು ಸ್ಥಳೀಯರು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ 2.30ರ ವೇಳೆ ಮೃತಪಟ್ಟಿದ್ದಾನೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ ಆಶೋಕನಗರ ಪೊಲೀಸರು ತಕ್ಷಣವೇ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಕೊಲೆಯಾದ ಯುವಕ ಹಾಗೂ ಆರೋಪಿ ಒಂದೇ ಕೋಮಿನವರಾಗಿದ್ದು ಕೊಲೆಯಾದ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ಥ್ ವ್ಯವಸ್ಥೆ ಮಾಡಲಾಗಿದ್ದು ಪರಿಸ್ಥಿತಿ ಶಾಂತವಾಗಿದೆ ಎಂದು ಅವರು ತಿಳಿಸಿದರು.
Previous Articleವಿಕ್ರಾಂತ್ ರೋಣದ ಬಗ್ಗೆ ಟೀಕೆಗಳ ಸುರಿಮಳೆ
Next Article ಬಲೆಗೆ ಸಿಲುಕಿ ನರಳಾಡುತಿದ್ದ ಬಾರಿ ಗಾತ್ರದ ಹೆಬ್ಬಾವು