Bengaluru: ಸರ್ಕಾರದ ಕಾಮಗಾರಿಗಳ ಗುತ್ತಿಗೆಯಲ್ಲಿ ಮೊದಲು 40% ಕಮಿಷನ್ ಇದ್ದದ್ದು ಈಗ 50% ಪರ್ಸೆಂಟ್ ಕಮಿಷನ್ ಆಗಿದೆ. ಕಮಿಷನ್ಗೂ ಪ್ರಮೋಷನ್ ಕೊಟ್ಟ ದೇಶದ ಏಕೈಕ ಸರ್ಕಾರ ಬಸವರಾಜ ಬೊಮ್ಮಾಯಿಯವರದ್ದಾಗಿದೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು ಇತ್ತೀಚೆಗೆ ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ಮೇಲೆ ಕಮಿಷನ್ ಪರ್ಸಂಟೇಜ್ ಜಾಸ್ತಿಯಾದಂತಿದೆ. ಬೊಮ್ಮಾಯಿಯವರೆ, ದೆಹಲಿಗೆ ಕಪ್ಪ ಕಾಣಿಕೆ ಸಲ್ಲಿಸಲು ಈ ಕಮಿಷನ್ ರೇಟ್ ಜಾಸ್ತಿಯಾಯಿತೆ.? ಎಂದು ಪ್ರಶ್ನಿಸಿದ್ದಾರೆ.
ಬೊಮ್ಮಾಯಿಯವರೆ, ಮುಂದಿನ ತಿಂಗಳು ಪ್ರಧಾನಿ ಮೋದಿ ಮಂಗಳೂರಿಗೆ ಬರುತ್ತಿದ್ದಾರೆ. ಪ್ರತಿ ಸಲ ಅವರ ಬುರುಡೆ ಭಾಷಣ ಕೇಳಿ ಕೇಳಿ ಸಾಕಾಗಿದೆ. ಈ ಬಾರಿಯಾದರೂ 40% ಕಮಿಷನ್ 50% ಏರಿಕೆಯಾಗಿದ್ದು ಯಾಕೆ.? ಅದು ಯಾರ ಉದ್ಧಾರಕ್ಕೆ.? ಕಮಿಷನ್ ದಂಧೆಯಲ್ಲಿ BJP ನಾಯಕರಿಗೆ ಸಂದಾಯವಾಗುತ್ತಿರುವ ಪಾಲಿನ ಬಗ್ಗೆ ಮೋದಿಯವರಿಂದ ಭಾಷಣ ಮಾಡಿಸಲು ಸಾಧ್ಯವೇ ಎಂದಿದ್ದಾರೆ.
ಸರ್ಕಾರದ ಭ್ರಷ್ಟಾಚಾರದ ಕರ್ಮಕಾಂಡದ ಬಗ್ಗೆ ಮೊನ್ನೆಯಷ್ಟೇ ಹೈಕೋರ್ಟ್ ಚಾಟಿ ಬೀಸಿದೆ. ಇಷ್ಟದಾರೂ ಈ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಈ ಸರ್ಕಾರದ ನಡೆ ನೋಡಿದರೆ ಆಲಿಬಾಬ ಮತ್ತು 40 ಕಳ್ಳರ ಕಥೆ ನೆನಪಾಗುತ್ತದೆ. ಕಳ್ಳರು ಜನರಿಂದ ದೋಚಿದರೆ, ಆಲಿಬಾಬ ಕಳ್ಳರಿಂದ ದೋಚಿದಂತಾಗಿದೆ. ಆದರೆ ಇಲ್ಲಿ ಆ ಆಲಿಬಾಬ ಯಾರು ಎಂದು ಮೋದಿಯವರನ್ನೇ ಕೇಳಬೇಕು ಎಂದು ಟೀಕಿಸಿದ್ದಾರೆ.
Previous Articleಕಾಂಗ್ರೆಸ್ ಸೇರಲು ಸಜ್ಜಾದ ಮಲ್ಲಿಕಾರ್ಜುನ ಖೂಬಾ..
Next Article ದಂಡೆತ್ತಿ ಬಂದ ಜವರಾಯ