ಬೆಂಗಳೂರು, ಏ.28: ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿ ಅಗತ್ಯ ಪರಿಹಾರ ಕಾಮಗಾರಿ ಕೈಗೊಳ್ಳಲು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಆರ್ಥಿಕ ನೆರವು ಸಾಕಾಗುತ್ತಿಲ್ಲ ಎಂದು ಆರೋಪಿಸಿ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧರಣಿ ನಡೆಸಿದರು.
ವಿಧಾನಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿದ ಅವರು ರಾಜ್ಯಕ್ಕೆ ನ್ಯಾಯಯುತವಾಗಿ ಸಿಗಬೇಕಾಗಿರುವ ಪರಿಹಾರ ಸಿಗುವವರೆಗೆ ತಮ್ಮ ಹೋರಾಟ ಮುಂದುವರೆಯಲಿದೆ ಎಂದು ಘೋಷಿಸಿದರು.
ಪ್ರಾಕೃತಿಕ ವಿಕೋಪ ನಿರ್ವಹಣೆ ನಿಧಿ ಅನ್ವಯ ರಾಜ್ಯಕ್ಕೆ 18,171 ಕೋಟಿ ರೂಪಾಯಿ ನೀಡಬೇಕಾಗಿದ್ದರೂ ಕೇಂದ್ರ ಸರ್ಕಾರ ಕೇವಲ 3,498 ಕೋಟಿಗೆ ಅನುಮೋದನೆ ನೀಡಿ, 3,454 ಕೋಟಿ ಬಿಡುಗಡೆ ಮಾಡಿದೆ. ಬರ ಪರಿಹಾರಕ್ಕಾಗಿ ಈ ಹಣ ಸಾಲದು. ಬಾಕಿ ಪರಿಹಾರ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಅಗ್ರಹಿಸಿದರು ರಾಜ್ಯಕ್ಕೆ ಸಿಗಬೇಕಾದ ಬರ ಪರಿಹಾರ ನೆರವಿಗಾಗಿ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಬೇಕಾಯಿತು ಎಂದು ವಿಷಾದಿಸಿದ ಅವರು ಮಳೆ ಅಭಾವದಿಂದಾಗಿ 48 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ನಷ್ಟವಾಗಿದ್ದು, ಇದರ ಅಂದಾಜು ವೌಲ್ಯ 35 ಸಾವಿರ ಕೋಟಿ ರೂ.ಗಳು. ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ, 18,172 ಕೋಟಿ ರೂ. ಪರಿಹಾರ ನೀಡುವಂತೆ ಮನವಿ ಮಾಡಿದ್ದೆವು.
ಸುಪ್ರೀಂಕೋರ್ಟ್ ಚಾಟಿ ಬೀಸಿದ ಮೇಲೆ 15 ದಿನದಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಕೇಂದ್ರ ಹೇಳಿತ್ತು. ಮತ್ತೆ ಹೆಚ್ಚುವರಿಯಾಗಿ ಒಂದು ವಾರ ಸಮಯ ಕೇಳಿ ಈಗ ಪ್ರಸ್ತಾವನೆ ಸಲ್ಲಿಸಿದ್ದರ ಪೈಕಿ ಶೇ.19 ರಷ್ಟು ಪರಿಹಾರ ನೀಡುವುದಾಗಿ ಹೇಳಿದೆ. 3,454 ಕೋಟಿ ರೂ. ಪರಿಹಾರ ನೀಡುವುದಾಗಿ ಹೇಳಿದೆ. 14,718 ಕೋಟಿ ರೂ. ಕೊಡುತ್ತಿಲ್ಲ ಎಂದು ವಿವರಿಸಿದರು.
ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಅಮಿತ್ ಶಾ ಅವರುಗಳು ರಾಜ್ಯಕ್ಕೆ ಬಂದು ಸುಳ್ಳು ಹೇಳಿದರು. ಪ್ರಸ್ತಾವನೆ ಸಲ್ಲಿಸುವುದು ತಡವಾಗಿದೆ ಎಂದಾಗಿದ್ದರೆ, ತಾವು ಭೇಟಿ ಮಾಡಿದ್ದಾಗಲೇ ಅಮಿತ್ ಶಾ ಹೇಳಬಹುದಿತ್ತು. ದ್ವೇಷದ ರಾಜಕಾರಣಕ್ಕಾಗಿ ಸುಳ್ಳು ಹೇಳುತ್ತಿದ್ದಾರೆ ಎಂದರು.
ನಮ್ಮ ಗ್ಯಾರಂಟಿ ಯೋಜನೆಗಳಿಗೆ ಹಣ ಕೇಳುತ್ತಿಲ್ಲ, ಬರಪೀಡಿತ ರೈತರ ಪರಿಹಾರಕ್ಕೆ ಹಣ ಕೇಳುತ್ತಿದ್ದೇವೆ. ನಾವು ಸಂಗ್ರಹಿಸಿಕೊಟ್ಟ ತೆರಿಗೆಯಲ್ಲಿ ನಮಗೆ ಸರಿಯಾದ ಪಾಲು ನೀಡುವುದು ಮತ್ತು ರೈತರಿಗೆ ಪರಿಹಾರ ನೀಡುವುದು ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.
ಕೇಂದ್ರ ಸರ್ಕಾರದ ನೆರವಿಗೆ ಕಾಯದೆ ಈಗಾಗಲೇ ರಾಜ್ಯ ಸರ್ಕಾರ 34 ಲಕ್ಷ ರೈತರಿಗೆ ರಾಜ್ಯಸರ್ಕಾರ ತನ್ನ ಬೊಕ್ಕಸದಿಂದಲೇ ತಲಾ 2 ಸಾವಿರ ರೂ. ಪರಿಹಾರವನ್ನು ಪಾವತಿಸಿದೆ. ಎಲ್ಲರಿಗೂ ಸಮರ್ಪಕವಾಗಿ ಪರಿಹಾರ ದೊರೆಯುತ್ತಿದೆ. ಯಾವ ರೈತರೂ ಪರಿಹಾರ ಸಿಕ್ಕಿಲ್ಲ ಎಂದು ದೂರು ನೀಡಿಲ್ಲ. ಕುಮಾರಸ್ವಾಮಿ ಸುಳ್ಳು ಟೀಕೆಗಳನ್ನು ಮಾಡುತ್ತಿದ್ದಾರೆ. ನಾವು ರೈತರಿಗೆ ಪರಿಹಾರ ನೀಡುತ್ತಿದ್ದೇವೆಯೇ ಹೊರತು ಕುಮಾರಸ್ವಾಮಿಯವರಿಗಲ್ಲ ಎಂದು ತಿರುಗೇಟು ನೀಡಿದರು.
ಗಾಂಧಿ ಪ್ರತಿಮೆ ಮುಂದೆ ಧರಣಿಗೂ ಮುನ್ನ ದೇವರಾಜ ಅರಸು ಪ್ರತಿಮೆಯಿಂದ ಗಾಂಧಿ ಪ್ರತಿಮೆ ಯವರೆಗೆ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ , ಸಚಿವರಾದ ಜಿ. ಪರಮೇಶ್ವರ, ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ಎನ್. ಚಲುವರಾಯಸ್ವಾಮಿ, ದಿನೇಶ್ ಗುಂಡೂರಾವ್, ಕೆ. ಎಚ್. ಮುನಿಯಪ್ಪ, ಶಾಸಕರಾದ ಎಚ್. ಸಿ. ಬಾಲಕೃಷ್ಣ, ರಿಜ್ವಾನ್ ಅರ್ಷದ್ ಮತ್ತಿತರರೊಂದಿಗೆ ಪಾದಯಾತ್ರೆ ನಡೆಸಿದರು.