ಬೆಂಗಳೂರು,ಜು.13- ರಾಜ್ಯ ಕಾಂಗ್ರೆಸ್ ನಲ್ಲಿ ಕುತೂಹಲಕಾರಿ ವಿದ್ಯಮಾನಗಳು ನಡೆಯುತ್ತಿವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಪ್ತೆ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಬಿಜೆಪಿ ನಾಯಕ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಮೊನ್ನೆಯಷ್ಟೇ ಶಿವಕುಮಾರ್ ಅವರ ಜೊತೆ ಮಾತುಕತೆ ನಡೆಸಿದ್ದ ಹೆಬ್ಬಾಳ್ಕರ್ ಇದೀಗ ವಿದೇಶ ಪ್ರವಾಸದಿಂದ ಹಿಂದಿರುಗಿದ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬೆಳಗಾವಿ ಜಿಲ್ಲೆಯ ರಾಜಕಾರಣದ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ.
ಈ ಮಾತುಕತೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹೆಬ್ಬಾಳ್ಕರ್, ಈ ಭೇಟಿಯಲ್ಲಿ ರಾಜಕೀಯದ ವಿಚಾರ ಇರಲಿಲ್ಲ. ರಾಜಕಾರಣಕ್ಕೂ ಈ ಭೇಟಿಗೂ ಸಂಬಂಧ ಇಲ್ಲ. ಕೆಲವೊಂದು ವಿಚಾರಗಳ ಬಗ್ಗೆ ಅವರ ಸಲಹೆ ಪಡೆಯಲು ಬಂದಿದ್ದೆ ಎಂದು ಸ್ಪಷ್ಟಪಡಿಸಿದರು.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಳಂಬ ವಿಚಾರದ ಬಗ್ಗೆಯೂ ಯಡಿಯೂರಪ್ಪ ಬಳಿ ಚರ್ಚೆ ಮಾಡಿದ್ದೇನೆ. ತಾಂತ್ರಿಕ ಕಾರಣಕ್ಕೆ ಮೀಸಲಾತಿ ವಿಳಂಬ ಆಗಿದೆ. ಬೊಮ್ಮಾಯಿ ಅವರು ಬೇರೆ ಸಮುದಾಯಗಳಿಗೆ ತೊಂದರೆ ಆಗದಂತೆ ಮೀಸಲಾತಿ ಕೊಡುವ ಭರವಸೆ ನೀಡಿದ್ದಾರೆ. ಈ ಅವಧಿಯಲ್ಲೇ ಮೀಸಲಾತಿ ಸಿಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.