ರಾಜ್ಯ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ತಮ್ಮದೇ ಕಾರ್ಯತಂತ್ರದ ಮೂಲಕ ಸಜ್ಜಾಗುತ್ತಿವೆ.ಅಧಿಕಾರ ಚುಕ್ಕಾಣಿ ಹಿಡಿಯಲೇಬೇಕೆಂದು ಪಟ್ಟು ಹಿಡಿದವರಂತೆ ಕೆಲಸ ಮಾಡುತ್ತಿವೆ.ಪ್ರತಿ ಕ್ಷೇತ್ರದಲ್ಲೂ ಸಂಭಾವ್ಯ ಅಭ್ಯರ್ಥಿಗಳಿಗೆ ಕೆಲಸ ಮಾಡುವಂತೆ ಸೂಚಿಸಲಾಗಿದೆ.ಹಾಲಿ ಶಾಸಕರು ಮತ್ತೆ ಗೆಲ್ಲುವ ದೃಷ್ಟಿಯಿಂದ ಮತದಾರರ ಮನಗೆಲ್ಲಲು ನಾನಾ ಕಸರತ್ತು ಮಾಡುತ್ತಿದ್ದಾರೆ.
ಈ ಎಲ್ಲಾ ಕ್ಷೇತ್ರಗಳಲ್ಲಿ ವಾರ್ತಾಚಕ್ರ ಒಂದು ಸುತ್ತು ಹಾಕಿದ್ದು, ಸದ್ಯ ಇಲ್ಲಿ ಮತದಾರರ ಒಲವು ಯಾರ ಪರ ಇದೆ ಎಂಬ ನಾಡಿ ಮಿಡಿತ ಅರಿಯುವ ಕೆಲಸ ಮಾಡಿದ್ದು ಅದನ್ನು ನಿಮ್ಮ ಮುಂದಿಡುತ್ತಿದೆ.
ಈ ವರದಿ ಸದ್ಯದ ಅವಲೋಕನ ಮಾತ್ರ .
ಕೊರಟಗೆರೆ ಕ್ಷೇತ್ರ
ತುಮಕೂರು ಜಿಲ್ಲೆಯ ಈ ಕ್ಷೇತ್ರ ರಾಜ್ಯದಲ್ಲಿ ಅತ್ಯಂತ ಪ್ರತಿಷ್ಟಿತ ಕ್ಷೇತ್ರವೆನಿಸಿದೆ ಕಾರಣ ಮಾಜಿ ಉಪ ಮುಖ್ಯಮಂತ್ರಿ ಕಾಂಗ್ರೆಸ್ ನಾಯಕ ಪರಮೇಶ್ವರ್ ಇಲ್ಲಿನ ಹುರಿಯಾಳು.
ಸರಿ ಸುಮಾರು ಒಂದು ದಶಕದ ಹಿಂದೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ಸರೆ,ಡಾ. ಪರಮೇಶ್ವರ್ ಹೆಸರು ಮುಖ್ಯಮಂತ್ರಿ ಹುದ್ದೆಯ ಪೈಪೋಟಿಯಲ್ಲಿರುತಿತ್ತು. ಆದರೆ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಸೋಲುವ ಮೂಲಕ ಇತಿಹಾಸದ ಪುಟ ಸೇರಿದರು.ಅದರ ಹಿಂದೆ ನಡೆದಿದ್ದ ಚುನಾವಣೆಯಲ್ಲಿ ರಾಜ್ಯದಲ್ಲೇ ಅತ್ಯಧಿಕ ಗೆಲುವಿನ ಅಂತರಗಳಿಕೆಯ ದಾಖಲೆ ನಿರ್ಮಿಸಿದ್ದ ಇವರು ಅಷ್ಟೇ ದಯನೀಯ ಸೋಲು ಕಂಡರು.
ನಂತರದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪರಮೇಶ್ವರ್ ಕ್ಷೇತ್ರದಲ್ಲಿ ನಾಲ್ಕನೆ ಬಾರಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.ಕ್ಷೇತ್ರದಲ್ಲಿ ವೈಟ್ ಕಾಲರ್ ರಾಜಕಾರಣಿ, ಜನರ ಭೇಟಿ ಸುಲಭವಾಗಿ ಸಾಧ್ಯವಿಲ್ಲ ಎಂಬ ಆರೋಪಗಳ ಬೆನ್ನಲ್ಲೇ ಅವರು ಕ್ಷೇತ್ರ ತೊರೆದು ನೆಲಮಂಗಲ ಇಲ್ಲವೇ ಬೆಂಗಳೂರಿನ ಮಹಾದೇವ ಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಗಳಿದ್ದು ಇವುಗಳೆಲ್ಲವುಗಳಿಗೆ ಈಗ ತೆರೆ ಬಿದ್ದಿದೆ.
ಕ್ಷೇತ್ರ ಪುನರ್ ವಿಂಗಡಣೆ ನಂತರ ಪರಿಶಿಷ್ಟ ಜಾತಿಗೆ ಮೀಸಲಿರುವ ಈ ಕ್ಷೇತ್ರ ಕೊರಟಗೆರೆ ತಾಲೂಕಿನ ಕೋಳಾಲ, ಹೊಳವನಹಳ್ಳಿ, ಚನ್ನರಾಯನದುರ್ಗ ಹಾಗೂ ತೋವಿನಕೆರೆ ಹೋಬಳಿ, ತುಮಕೂರು ತಾಲೂಕಿನ ಕೋರಾ ಹಾಗೂ ಮಧುಗಿರಿ ತಾಲೂಕಿನ ಪುರವರ ಹೋಬಳಿಗಳನ್ನೊಳಗೊಂಡಿದೆ .
ಕ್ಷೇತ್ರದಲ್ಲಿ ಸುಮಾರು ಎರಡು ಲಕ್ಷ ಮತದಾರರಿದ್ದಾರೆ. ಇದರಲ್ಲಿ ಶೇ. 30ರಷ್ಟುಅಂದರೆ ಸುಮಾರು 60 ಸಾವಿರ ಪರಿಶಿಷ್ಟಜಾತಿ ಮತಗಳಿವೆ.ಇದರಲ್ಲಿ ಪರಿಶಿಷ್ಟ ಜಾತಿಯ ಎಡಗೈ ಪಂಗಡಕ್ಕೆ ಸೇರಿದ ಮತದಾರರ ಪ್ರಮಾಣ ಸುಮಾರು 40 ಸಾವಿರದಷ್ಟಿದೆ.
ತಲಾ ಶೇ.15ರಷ್ಟುಅಂದರೆ ಸುಮಾರು 30 ಸಾವಿರ ಲಿಂಗಾಯತ ಹಾಗೂ 30 ಸಾವಿರ ಒಕ್ಕಲಿಗ ಮತಗಳಿವೆ. ಸುಮಾರು15 ಸಾವಿರದಷ್ಟು ಕುರುಬರು, ಸುಮಾರು15 ಸಾವಿರದಷ್ಟು ಯಾದವ ಹಾಗೂ ಸುಮಾರು 12 ಸಾವಿರದಷ್ಟುಮುಸ್ಲಿಂ ಮತದಾರರನ್ನು ಈ ಕ್ಷೇತ್ರ ಒಳಗೊಂಡಿದ್ದು ಉಳಿದಂತೆ ಬಲಜಿಗ, ತಿಗಳ ಉಪ್ಪಾರ,ಮೊದಲಾದ ಜಾತಿಗಳ ಮತದಾರರಿದ್ದಾರೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಾಂಪ್ರದಾಯಿಕ ಮತ ಬ್ಯಾಂಕ್ ಹೊಂದಿವೆ.ಮಾಜಿ ಶಾಸಕ ಪಿ.ಸುಧಾಕರ ಲಾಲ್ ಸದಾ ಕ್ಷೇತ್ರದಲ್ಲೇ ಇದ್ದು ಯಾವುದೇ ಸಮಯದಲ್ಲಾದರೂ ಭೇಟಿ ಸಾಧ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೆಡಿಎಸ್ ಸಾಂಪ್ರದಾಯಿಕ ಮತ ಬ್ಯಾಂಕ್ ನೆಚ್ಚಿಕೊಂಡಿರುವ ಅವರು ಅಲ್ಪಸಂಖ್ಯಾತರು, ಕಾಂಗ್ರೆಸ್ ವಿರೋಧಿ ಮತಗಳನ್ನು ನೆಚ್ಚಿಕೊಂಡಿದ್ದಾರೆ. ಇದರ ಜೊತೆಗೆ ತಮ್ಮ ರಾಜಕೀಯ ಗುರು ಕಾಂಗ್ರೆಸ್ ನ ಕೆ.ಎನ್.ರಾಜಣ್ಣ ಪಕ್ಷದ ಗೆರೆ ಮೀರಿ ಆಂತರಿಕವಾಗಿ ತಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ.ಯಾದವ,ಕುಂಚಟಿಗ ಸಮುದಾಯ ತಮ್ಮ ಕೈ ಹಿಡಿಯಲಿದೆ ಎಂದು ನಂಬಿ ಕೆಲಸ ಮಾಡುತ್ತಿದ್ದಾರೆ.
ಇದರ ನಡುವೆ ಬಿಜೆಪಿ ಈ ಬಾರಿ ಕಮಲ ಅರಳಿಸಲು ತಂತ್ರ ರೂಪಿಸುತ್ತಿದೆ.ಬಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಮತದಾರರು ಬಿಜೆಪಿ ಪರ ಒಲವಿದ್ದಾರೆ ಎನ್ನುವುದು ರಾಜ್ಯದ ಹಲವು ಕಡೆ ಸಾಬೀತಾಗಿದೆ ಹಾಗೇಯೆ ಈ ವರ್ಗದ ಜನಪ್ರತಿನಿಧಿಗಳ ಸಂಖ್ಯೆಯೂ ಹೆಚ್ಚಾಗಿದೆ.
ಇದನ್ನು ನೆಪವಾಗಿಸಿಕೊಂಡು ಕೊರಟಗೆರೆಯಲ್ಲಿ ಈ ವರ್ಗದವರಿಗೆ ಬಿಜೆಪಿ ಟಿಕೆಟ್ ಕೊಟ್ಟರೆ ಸಮುದಾಯದ ಮತಗಳ ಜೊತೆಗೆ ಬಿಜೆಪಿಯ ಸಾಂಪ್ರದಾಯಿಕ ಮತಗಳು, ಲಿಂಗಾಯತ, ಯಾದವ ಮತ್ತು ತಿಗಳ ಸಮುದಾಯದ ಮತಗಳನ್ನು ಗಳಿಸಬಹುದು ಎಂಬ ಲೆಕ್ಕಾಚಾರ ನಡೆದಿದೆ.
ಇದೇ ಲೆಕ್ಕಾಚಾರದಿಂದಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯೂ ಬೆಳೆದಿದೆ ಇದೇ ಸಮುದಾಯಕ್ಕೆ ಸೇರಿದವನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್, ವೈದ್ಯ ಡಾ.ಲಕ್ಷ್ಮೇಕಾಂತ್, ಉದ್ಯಮಿ ಮುನಿಯಪ್ಪ ಕ್ಷೇತ್ರದಲ್ಲಿ ಭರಾಟೆಯ ಪ್ರವಾಸ ಮಾಡುತ್ತಿದ್ದಾರೆ. ಮಾಜಿ ಶಾಸಕ ಗಂಗ ಹನುಮಯ್ಯ ವೈ.ಎಚ್.ಹುಚ್ಚಯ್ಯ ಕೂಡಾ ಪ್ರಯತ್ನ ನಡೆಸಿದ್ದಾರೆ.
ಗೆಲ್ಲುವ ಹಠಕ್ಕೆ ಬಿದ್ದಿರುವ ಡಾ. ಪರಮೇಶ್ವರ್ ಕಳೆದ ಆರು ತಿಂಗಳಿಂದ ಕಾಲಿಗೆ ಚಕ್ರ ಕಟ್ಟುಕೊಂಡವರಂತೆ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ.ಈ ಮೂಲಕ ಕ್ಷೇತ್ರದಲ್ಲಿ ಅಲಭ್ಯ ಎಂಬ ದೂರು ಇಲ್ಲವಾಗಿಸುವ ಪ್ರಯತ್ನ ನಡೆಸಿದ್ದಾರೆ.ಆದರೂ ಇವರನ್ನು ಭೇಟಿಯಾಗಬೇಕಾದರೆ ತುಮಕೂರು ಇಲ್ಲವೇ ಬೆಂಗಳೂರಿಗೆ ಬರಬೇಕೆನ್ನುವ ದೂರಿನ ಕಾವು ಮಾತ್ರ ಕಡಿಮೆಯಾಗಿಲ್ಲ.
ಇದರ ನಡುವೆ ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳು ಗೃಹ ಸಚಿವರಾಗಿದ್ದ ಅವಧಿಯಲ್ಲಿ ಕೊರಟಗೆರೆಗೆ ಪೊಲೀಸ್ ತರಬೇತಿ ಕೇಂದ್ರ, ಅಗ್ನಿ ಶಾಮಕ ಠಾಣೆ,ಸುಸಜ್ಜಿತ ಆಸ್ಪತ್ರೆ,ಶಾಲಾ ಕಟ್ಟಡಗಳು, ವಸತಿ ಶಾಲೆಗಳು ಎಲ್ಲಾ ಗ್ರಾಮಗಳಿಗೂ ಅತ್ಯಾಧುನಿಕ ಪಂಚಾಯತಿ ಕಟ್ಟಡ ಸೇರಿದಂತೆ ಹಲವಾರು ಕಾಮಗಾರಿಗಳು ಇವರ ಸಾಧನೆಯನ್ನು ಹೇಳುತ್ತಿವೆ.
ಇವುಗಳ ಬಗ್ಗೆ ಜನರಿಗೆ ಮೆಚ್ಚುಗೆ ಇದೆ.
ಪಕ್ಷ ಸಂಘಟನೆಯಲ್ಲಿ ಕೈಗೊಂಡ ಕ್ರಮಗಳು, ರಾಹುಲ್ ಪಾದಯಾತ್ರೆ, ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಕ್ಷೇತ್ರದಲ್ಲಿ ಸಂಚರಿಸಿದ್ದು ಪರಮೇಶ್ವರ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಹೀಗಾಗಿ ಮೇಲ್ನೋಟಕ್ಕೆ ಪರಮೇಶ್ವರ್ ಕ್ಷೇತ್ರದಲ್ಲಿ ಎಲ್ಲರಿಗಿಂತ ಮುಂದಿದ್ದು ಗೆಲುವು ನಿಶ್ಚಿತ ಎನ್ನಲಾಗಿದೆ ಪಕ್ಷದಲ್ಲಿ ಒಳೇಟು ಬೀಳದೆ ಹೋದರೆ ದಾಖಲೆ ಅಂತರದಲ್ಲಿ ಗೆಲುವು ಸಾಧಿಸಬಹುದು ಎನ್ನುವ ವಾತಾವರಣ ಸದ್ಯಕ್ಕಿದೆ
ಸಾಕ್ಷಾತ್ ಸಮೀಕ್ಷೆ :ಆರ್.ಎಚ್ ನಟರಾಜ್.ಹಿರಿಯ ಪತ್ರಕರ್ತ