ಜಾರ್ಖಂಡ್,ಜ.26-
ಬರೋಬರಿ 48 ಪೊಲೀಸರನ್ನು ಮತ್ತು ಭದ್ರತಾ ಪಡೆಗಳ ಸಿಬ್ಬಂದಿಗಳನ್ನು ಕೊಂದ ಮಾವೋವಾದಿ ನಕ್ಸಲ್ ಕಮಾಂಡರ್ ನವೀನ್ ಯಾದವ್ ಅಲಿಯಾಸ್ ಸರ್ವ್ಜಿತ್ ಯಾದವ್ ಪೊಲೀಸರಿಗೆ ಶರಣಾಗಿದ್ದಾನೆ. ಸರ್ವ್ಜಿತ್ ಯಾದವ್ ಚತ್ರಾ ಜಿಲ್ಲೆಯ ಬಶುಟ್ಟಾ ಗ್ರಾಮದ ನಿವಾಸಿಯಾಗಿದ್ದು, ತಲೆಮರೆಸಿಕೊಂಡಿದ್ದ ಈತನ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ನಕ್ಸಲ್ ಕಮಾಂಡರ್ ಸರ್ವ್ಜಿತ್ ಯಾದವ್ನನ್ನು ಪತ್ತೆಹಚ್ಚಲು ಸರ್ಕಾರ ಈತನ ಮೇಲೆ 25 ಲಕ್ಷ ರೂ ಬಹುಮಾನ ಘೋಷಿಸಿತ್ತು. ಆದರೆ ಆತನೇ ಬಂದು ಪೊಲೀಸರ ಮುಂದೆ ಶರಣಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಆದರೆ ಸರ್ವ್ಜಿತ್ ಯಾದವ್ ಶರಣಾಗತಿ ಆಗಿರುವ ಬಗ್ಗೆ ಪೊಲೀಸರು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆತನನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿಗಳು ಹರಿದಾಡುತ್ತಿವೆ. ಸರ್ವ್ಜಿತ್ ಯಾದವ್ ಸುಮಾರು 40 ಪೊಲೀಸರನ್ನು ಮತ್ತು ಭದ್ರತಾ ಪಡೆಗಳ ಸಿಬ್ಬಂದಿಗಳನ್ನು ಕೊಂದಿದ್ದಾನೆ.
2016 ಜೂನ್ ತಿಂಗಳಿನಲ್ಲಿ ಬಿಹಾರದ ಔರಂಗಾಬಾದ್-ಗಯಾ ಗಡಿಯಲ್ಲಿ ನಡೆದ ದಾಳಿಯಲ್ಲಿ 10 ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ್ದರು.
2013ರಲ್ಲಿ ಲತೇಹರ್ ಕಟಿಯಾದಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ದಾಳಿಯಲ್ಲಿ 17 ಸಿಬ್ಬಂದಿಗಳ ಸಾವಿಗೆ ಪ್ರಮುಖ ಕಾರಣನಾಗಿದ್ದ ಸರ್ವ್ಜಿತ್ ಯಾದವ್.
2011ರಲ್ಲಿ ಗರ್ಹಾದಲ್ಲಿ ನಡೆದ ದಾಳಿಯಲ್ಲಿ 13 ಮಂದಿ ಸಿಬ್ಬಂದಿಗಳು ಹುತಾತ್ಮರಾಗಿದ್ದರು.
2011ರಲ್ಲಿ ಚತ್ರಾದ ಆಗಿನ ಸಂಸದರಾಗಿದ್ದ ಇಂದರ್ ಸಿಂಗ್ ನಾಮಧಾರಿ ಅವರ ಬೆಂಗಾವಲು ವಾಹನದ ಮೇಲೆ ದಾಳಿ ಮಾಡಿದ್ದನು. ಇದರಿಂದಾಗಿ 8 ಮಂದಿ ಸಾವನ್ನಪ್ಪಿದ್ದರು.